November 28, 2025
WhatsApp Image 2024-09-26 at 11.57.47 AM

ಮಂಗಳೂರು: ಕಾಸ್ಮೆಟಿಕ್ ಸರ್ಜರಿ ವೇಳೆ ಯುವಕ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ನಗರದ ಕಂಕನಾಡಿಯ ಬೆಂದೂರ್ ವೆಲ್‌ನ ಫ್ಲೋಂಟ್ ಕಾಸ್ಮೆಟಿಕ್ ಸರ್ಜರಿ ಮತ್ತು ಹೇರ್ ಟ್ರಾನ್ಸ್ ಫ್ಲೋಂಟ್ ಕ್ಲಿನಿಕ್ ಅನ್ನು ಆರೋಗ್ಯ ಇಲಾಖೆಯು ತಾತ್ಕಾಲಿಕವಾಗಿ ಮುಚ್ಚುಗಡೆ ಮಾಡಿದೆ. ಕಾಸ್ಮೆಟಿಕ್ ಸರ್ಜರಿಗೆ ತೆರಳಿದ್ದ ಉಳ್ಳಾಲದ ಅಕ್ಕರೆಕೆರೆ ನಿವಾಸಿ ಮುಹಮ್ಮದ್ ಮಾಝಿನ್ ಮೃತಪಟ್ಟ ಪ್ರಕರಣದ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ರ ನಿರ್ದೇಶನದಂತೆ ದ.ಕ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಆರ್. ತಿಮ್ಮಯ್ಯ ಅವರು ಫ್ಲೋಂಟ್ ಕಾಸ್ಮೆಟಿಕ್ ಸರ್ಜರಿ ಮತ್ತು ಹೇರ್ ಟ್ರಾನ್ಸ್‌ ಫ್ಲೋಂಟ್ ಕ್ಲಿನಿಕ್ ನ್ನು ಮುಚ್ಚಿಸಿದ್ದಾರೆ. ಕಾಸ್ಮೆಟಿಕ್ ಸರ್ಜರಿಗೆ ಮುನ್ನ ಅರಿವಳಿಕೆ ನೀಡುವಾಗ ಎಸಗಿರುವ ನಿರ್ಲಕ್ಷ್ಯವೇ ಮಾಝಿನ್‌ರ ಸಾವಿಗೆ ಕಾರಣ ಎಂದು ಮೃತರ ಕುಟುಂಬಸ್ಥರು ಆರೋಪ ಮಾಡಿರುವ ವರದಿ ವಿವಿಧ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ ಆರೋಗ್ಯ ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ. ಮಾಝಿನ್‌ ತನ್ನ ಎದೆಯ ಎಡಭಾಗದಲ್ಲಿದ್ದ ಸಣ್ಣ ಗುಳ್ಳೆಯ ನಿವಾರಣೆಗಾಗಿ ಶನಿವಾರ ಫ್ಲೋಂಟ್ ಕ್ಲಿನಿಕ್ ಗೆ ತೆರಳಿದ್ದರು. ಆದರೆ ಅಲ್ಲಿ ಸರ್ಜರಿ ವೇಳೆ ಅವರು ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯದ ಕಾರಣ ಈ ಸಾವು ಸಂಭವಿಸಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಆರೋಗ್ಯಾಧಿಕಾರಿಗಳ ತಂಡ ಕ್ಲಿನಿಕ್‌ ಗೆ ಭೇಟಿ ನೀಡಿ ಈ ಬಗ್ಗೆ ಮಾಹಿತಿ ಕಲೆ ಹಾಕಿದೆ. ಪ್ರಕರಣದ ತನಿಖೆ ನಡೆಸುವಂತೆ ಆರೋಗ್ಯ ಇಲಾಖೆಗೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. “ಕ್ಲಿನಿಕ್‌ನಲ್ಲಿ ಸೂಕ್ತ ಮೂಲಭೂತ ಸೌಕರ್ಯ ವಿಲ್ಲದಿರುವುದು ಆರೋಗ್ಯ ಅಧಿಕಾರಿಗಳ ಪ್ರಾಥಮಿಕ ತನಿಖೆಯ ವೇಳೆ ಕಂಡುಬಂದಿದೆ. ಪ್ರಕರಣದ ಬಗ್ಗೆ ತನಿಖೆಗೆ ತಜ್ಞರ ಸಮಿತಿ ರಚಿಸಲಾಗಿದೆ. ಸಮಿತಿಯು ತನಿಖೆ ನಡೆಸಿ ವರದಿಯನ್ನು ಜಿಲ್ಲಾಧಿಕಾರಿಗೆ ಕಳುಹಿಸಲಿದೆ” ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಆರ್. ತಿಮ್ಮಯ್ಯ ಮಾಹಿತಿ ನೀಡಿದ್ದಾರೆ.

About The Author

Leave a Reply