
ಬೆಂಗಳೂರು : ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ವಿಪಕ್ಷ ನಾಯಕರು, ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರ ಮಧ್ಯ ಮಾಜಿ ಸ್ಪೀಕರ್ ಆಗಿರುವಂತಹ ಕೆಬಿ ಕೋಳಿವಾಡ ಅವರು ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಹೇಳಿಕೆ ನೀಡಿದ್ದಾರೆ.ಇದಕ್ಕೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು ನಾನು ಏನು ತಪ್ಪು ಮಾಡಿಲ್ಲ.ರಾಜೀನಾಮೆ ನೀಡುವ ಪ್ರಶ್ನೆ ಇಲ್ಲ ಎಂದು ಮತ್ತೊಮ್ಮೆ ಸ್ಪಷ್ಟನೆ ನೀಡಿದರು.



ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ರಾಜೀನಾಮೆಗೆ ಕೆ.ಬಿ ಕೋಳಿವಾಡ ಆಗ್ರಹದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಕೆ ಬಿ ಕೋಳಿವಾಡ ಅವರು ತಮ್ಮ ವೈಯಕ್ತಿಕ ಅಭಿಪ್ರಾಯ ಹೇಳಿದ್ದಾರೆ. ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ. ಯಾಕೆಂದರೆ ನಾನು ಈ ಒಂದು ಕೇಸ್ ನಲ್ಲಿ ಏನು ತಪ್ಪೇ ಮಾಡಿಲ್ಲ ಎಂದು ಅವರು ಮತ್ತೊಮ್ಮೆ ಸ್ಪಷ್ಟನೆ ನೀಡಿದರು.
ಕೆಬಿ ಕೋಳಿವಾಡ ಹೇಳಿದ್ದೇನು?
ಈ ಕುರಿತಾಗಿ ಕೆಬಿ ಕೋಳಿವಾಡ, ಸಿಎಂ ಸಿದ್ದರಾಮಯ್ಯ ಎಷ್ಟೇ ಕಳಂಕ ರಹಿತರಾದರೂ ಪಕ್ಷದ ದೃಷ್ಟಿಯಿಂದ ರಾಜೀನಾಮೆ ನೀಡಲಿ. ನಿಷ್ಕಳಂಕರಾಗಿ ಹೊರಬಂದ ಬಳಿಕ ಮತ್ತೆ ಸಿಎಂ ಆಗಲಿ. ಸಿಎಂ ಸಿದ್ದರಾಮಯ್ಯ ಜೊತೆ ಪಕ್ಷದ 136 ಶಾಸಕರು ಇದ್ದಾರೆ. ಪಕ್ಷದ ದೃಷ್ಟಿಯಿಂದ ರಾಜೀನಾಮೆ ನೀಡಿ ನಿಷ್ಕಳಂಕರಾಗಲಿ ಎಂದಿದ್ದಾರೆ.
ಬೇರೆ ಬೇರೆ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದೆ. ಬಿಜೆಪಿಯವರು ಕಾಂಗ್ರೆಸ್ಗೆ ಮುಜುಗರ ಉಂಟು ಮಾಡಲು ಯತ್ನಿಸುತ್ತಿದ್ದಾರೆ. ಸಿದ್ದರಾಮಯ್ಯ ವಿಚಾರದಲ್ಲಿ ಪಕ್ಷಕ್ಕೆ ಮುಜುಗರವುಂಟು ಮಾಡುತ್ತಿದ್ದಾರೆ. ನನ್ನ 50 ವರ್ಷದ ರಾಜಕೀಯ ಜೀವನದಲ್ಲಿ ಅನೇಕ ಮುಖ್ಯಮಂತ್ರಿಗಳನ್ನು ಕಂಡಿದ್ದೇನೆ. ಆ ಪೈಕಿ ಕಪ್ಪು ಚುಕ್ಕೆ ಇಲ್ಲದೆ ಕೆಲಸ ಮಾಡಿದ ನಂಬರ್ 1 ಸಿಎಂ ಸಿದ್ದರಾಮಯ್ಯ. ಬಿಜೆಪಿ ಈಗ ಪರಿಸ್ಥಿತಿಯ ದುರ್ಬಳಕೆ ಮಾಡುವ ಕೆಲಸ ಮಾಡುತ್ತಿದೆ. ಪಕ್ಷವನ್ನು ಮುಜುಗರಕ್ಕೀಡು ಮಾಡುವ ಕುತಂತ್ರವನ್ನು ಪ್ರಧಾನಿ ಮೋದಿ ಮಾಡುತ್ತಿದ್ದಾರೆ ಎಂದು ಕೋಳಿವಾಡ ಹೇಳಿದ್ದಾರೆ.