
ಮಂಗಳೂರು: ನಗರದ ಹೊರವಲಯದ ಪೆರ್ಮುದೆ ಪಂಚಾಯತ್ ಕ್ರಾಸ್ ಬಳಿ ಎಂಡಿಎಂಎ ಮಾದಕದ್ರವ್ಯ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಜ್ಪೆ ಠಾಣಾ ಪೊಲೀಸರು ಬಂಧಿಸಿದ್ದಾರೆ.



ಮಂಗಳೂರಿನ 62ನೇ ತೋಕೂರು ಗ್ರಾಮದ ಜೋಕಟ್ಟೆಯ ನಿವಾಸಿ ಉಮ್ಮರ್ ಫಾರೂಕ್ ಮತ್ತು ಬಜ್ಪೆ ಜರಿನಗರದ ನಿವಾಸಿ ಮೊಹಮ್ಮದ್ ಅಬ್ದುಲ್ ಜುನೈದ್ ಬಂಧಿತ ಆರೋಪಿಗಳು. ಮಂಗಳೂರಿನ ತೆಂಕಎಕ್ಕಾರು ಗ್ರಾಮದ, ಬಜ್ಪೆಯಿಂದ ಕಟೀಲು ಕಡೆಗೆ ಹೋಗುವ ಪೆರ್ಮುದೆ ಪಂಚಾಯತ್ ಕ್ರಾಸ್‌ನಿಂದ ಅನತಿ ದೂರದಲ್ಲಿ ಆರೋಪಿಗಳು ಮಾದಕದ್ರವ್ಯ ಎಂಡಿಎಂಎ ಮಾರಾಟ ಮಾಡುತ್ತಿದ್ದರು. ಬಜ್ಪೆ ಠಾಣೆಯ ಪಿಎಸ್ಐ ರೇವಣಸಿದ್ದಪ್ಪರವರು ಸಿಬ್ಬಂದಿಯೊಂದಿಗೆ ದಾಳಿನಡೆಸಿ ಬಂಧಿಸಿದ್ದಾರೆ.
ಬಂಧಿತರಿಂದ 50,000 ರೂ. ಮೌಲ್ಯದ 9.11 ಗ್ರಾಂ ತೂಕದ ಮಾದಕದ್ರವ್ಯ ಎಂಡಿಎಂಎ ಸೇರಿದಂತೆ 2 ಮೊಬೈಲ್ ಪೋನ್‌ಗಳು, ಒಂದು ಬೈಕ್ ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರ ವಿರುದ್ಧ ಮಾದಕವಸ್ತು ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಂಡಿರುತ್ತಾರೆ. ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುತ್ತಾರೆ.