
ಹಾವೇರಿ : ನನ್ನನ್ನು ಸಿಎಂ ಸ್ಥಾನದಿಂದ ಕೆಳಗೆ ಇಳಿಸಲು ಆಪರೇಷನ್ ಕಮಲದ ಮೂಲಕ ಶಾಸಕರಿಗೆ 50 ಕೋಟಿ ರೂಪಾಯಿ ನೀಡಲಾಗಿದೆ ಎಂದು ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಸ್ಫೋಟಕ ಹೇಳಿಕೆ ನೀಡಿದ್ದಾರೆ.



ನಿನ್ನೆ ಹಾವೇರಿ ಜಿಲ್ಲೆಯ ಸಮಣೂರು ತಾಲೂಕಿನ ಹುರಳಿಕುಪ್ಪಿಯಲ್ಲಿ ಚುನಾವಣಾ ಪ್ರಚಾರದ ವೇಳೆ ಭಾಷಣ ಮಾಡಿದ ಅವರು, ಎಲ್ಲರೂ ಸೇರಿ ನನ್ನ ವಿರುದ್ಧ ಹುನ್ನಾರ ಮಾಡಿದ್ದಾರೆ.
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಗ ಭರತ್ ಬೊಮ್ಮಾಯಿನನ್ನು ಸೋಲಿಸಿ ಉತ್ತರ ಕೊಡಿ. ನನ್ನ ವಿರುದ್ಧ ನಡೆಯುತ್ತಿರುವ ಹುನ್ನಾರಕ್ಕೆ ಉತ್ತರ ಕೊಡಬೇಕಿದೆ. ನನ್ನ ರಾಜಕೀಯ ಜೀವನ ತೆರೆದ ಪುಸ್ತಕ.ಹೊಟ್ಟೆ ಕಿಚ್ಚಿನಿಂದ ಸಹಿಸದೆ ಹೇಗಾದರೂ ಮಾಡಿ ನನ್ನನ್ನು ಇಳಿಸಲು ಪ್ರಯತ್ನಿಸಲಾಗುತ್ತಿದೆ ಎಂದರು.
ಆಪರೇಷನ್ ಕಮಲದ ಮೂಲಕ ಅಧಿಕಾರದಿಂದ ನನ್ನ ಇಳಿಸಲು ಯತ್ನಿಸಲಾಗುತ್ತಿದೆ. ಒಬ್ಬ ಶಾಸಕರಿಗೆ 50 ಕೋಟಿ ಆಫರ್ ನೀಡಿ ಆಪರೇಷನ್ ಕಮಲಕ್ಕೆ ಯತ್ನಿಸಲಾಗಿದೆ. ಈಗ ನಾನು ರಾಜೀನಾಮೆ ಕೊಡಬೇಕು ಎಂದು ಅಂತಿದ್ದಾರೆ. ಕಾನೂನಿನಡಿ ಎದುರಿಸಲು ಸಿದ್ಧನಿದ್ದೇನೆ ಎಂದು ಹೇಳಿದ್ದೇನೆ ಆದರೂ ನನ್ನ ವಿರುದ್ಧ ಮಸಲತ್ತು ಮಾಡ್ತಾನೆ ಇದ್ದಾರೆ. ಹೇಗಾದರೂ ಮಾಡಿ ನನ್ನನ್ನು ಅಧಿಕಾರದಿಂದ ಕೆಳಗಿಳಿಸಲು ಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.