ಉಳ್ಳಾಲ : ಮರಳು ಧಂದೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆಂಬ ಆರೋಪಕ್ಕೆ ವ್ಯಕ್ತಿ ಮೇಲೆ ಹಲ್ಲೆ ನಡೆದ ಘಟನೆ ಮಂಗಳುರು ಹೊರವಲಯದ ಉಳ್ಳಾಲದಲ್ಲಿ ನಡೆದಿದೆ.
ಸೋಮೇಶ್ವರ ಉಚ್ಚಿಲದ ಫಿಶರೀಸ್ ರೋಡ್ ನಿವಾಸಿ ಸೋಮೇಶ್ವರ ಸೋಮನಾಥ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಕಿಶೋರ್ ಎಂ. ಉಚ್ಚಿಲ(53) ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದಾರೆ. ಸುನೀಲ್ ಎಂಬಾತ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದ್ದು ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಿಶೋರ್ ಅವರು ಸೋಮವಾರ ಬೆಳಗ್ಗೆ ತನ್ನ ಮಿತ್ರ ಪುಷ್ಪರಾಜ್ ಎಂಬವರ ಜತೆಯಲ್ಲಿ ಸೋಮೇಶ್ವರದ ಹೊಟೇಲಲ್ಲಿ ಚಹಾ ಕುಡಿದು ಸ್ಕೂಟರಲ್ಲಿ ಸಹ ಸವಾರನಾಗಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ಸೋಮೇಶ್ವರ ಪುರಸಭಾ ಕಚೇರಿ ಸಮೀಪದಲ್ಲಿ ಆರೋಪಿ ಸುನಿಲ್ ಅವರು ಮರಳುಗಾರಿಕೆಯ ಬಗ್ಗೆ ಭಾರೀ ಪೊಲೀಸರಿಗೆ ಮಾಹಿತಿ ನೀಡುತ್ತೀಯ, ಈ ಹಿಂದೆಯೇ ನಿನಗೆ ಗತಿ ಕಾಣಿಸಲು ಪ್ರಯತ್ನಿಸಿದ್ದೆ, ಇನ್ನು ಮೂರು ತಿಂಗಳೊಳಗೆ ನೀನೊಬ್ಬನೆ ಸಿಕ್ಕಿದರೆ ಕೊಂದು ಬಿಡುತ್ತೇನೆಂದು ಭುಜ ಮತ್ತು ಸೊಂಟಕ್ಕೆ ಹಲ್ಲೆ ನಡೆಸಿದ್ದು, ಬಳಿಕ ಸೊಂಟದಿಂದ ಚಾಕು ಹೊರ ತೆಗೆದು ಇರಿಯಲು ಮುಂದಾಗಿದ್ದಾನೆ ಎನ್ನಲಾಗಿದೆ. ಈ ವೇಳೆ ಸ್ನೇಹಿತ ಪುಷ್ಪರಾಜ್ ಅವರು ಸ್ಕೂಟರನ್ನ ವೇಗವಾಗಿ ಚಲಾಯಿಸಿದರ ಪರಿಣಾಮ ನಾನು ಪ್ರಾಣಾಪಾಯದಿಂದ ಪಾರಾಗಿದ್ದೇನೆಂದು ಹಲ್ಲೆಗೊಳಗಾದ ಕಿಶೋರ್ ಅವರು ಆರೋಪಿಸಿದ್ದಾರೆ. ಹಲ್ಲೆಗೊಳಗಾದ ಕಿಶೋರ್ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು ಉಳ್ಳಾಲ ಠಾಣೆಯಲ್ಲಿ ಆರೋಪಿ ಸುನಿಲ್ ವಿರುದ್ದ ಪ್ರಕರಣ ದಾಖಲಾಗಿದೆ.