
ಮಂಗಳೂರು : ನಗರದ ಕ್ಲಾಕ್ ಟವರ್ ಬಳಿ ಸೋಮವಾರ ಫೆಲೆಸ್ತೀನ್ ನಾಗರೀಕರ ಮೇಲಿನ ಇಸ್ರೇಲ್ ದಾಳಿಯನ್ನು ಖಂಡಿಸಿ ಪ್ರತಿಭಟನೆ ನಡೆಸಿದ ಸಿಪಿಎಂ-ಸಿಪಿಐ ಮತ್ತು ಸಮಾನ ಮನಸ್ಕ ಸಂಘಟನೆಗಳ ಸದಸ್ಯರ ವಿರುದ್ಧ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.
ಪ್ರತಿಭಟನೆಗೆ ಅನುಮತಿ ಕೋರಿ ಸಲ್ಲಿಸಿದ್ದ ಮನವಿಗೆ ಮಂಗಳೂರು ನಗರ ಪೊಲೀಸ್ ನ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ, ಅನುಮತಿ ನಿರಾಕರಿಸಿದ್ದರು. ಧ್ವನಿ ವರ್ಧಕ ಬಳಕೆಗೂ ಅನುಮತಿ ನಿರಾಕರಿಸಿದ್ದರು. ಇದರಿಂದ ಪ್ರತಿಭಟನೆಕಾರರು ಧ್ವನಿವರ್ಧಕ ಬಳಸದೆ ಪ್ರತಿಭಟನೆ ನಡೆಸಿದ್ದರು.
ಈ ಬಗ್ಗೆ ಸಹಾಯಕ ಪೊಲೀಸ್ ಇನ್ಸ್ಪೆಕ್ಟರ್ ಪ್ರವೀಣ್ ಕೆ ಅವರು, ಪ್ರತಿಭಟನೆಗೆ ಅನುಮತಿ ಇಲ್ಲದಿದ್ದರೂ, ಗುಂಪು ಕಟ್ಟಿಕೊಂಡು ಪ್ರತಿಭಟನೆ ನಡೆಸಲಾಗಿದೆ ಎಂದು ದೂರು ನೀಡಿದ್ದರು.
ಪ್ರತಿಭಟನೆಗೆ ನಿಷೇಧವಿದ್ದರೂ ಘೋಷಣೆಗಳನ್ನು ಕೂಗಿ, ಭಾಷಣ ಮಾಡಿದ್ದಾರೆ ಎಂದು ನಾಗೇಶ್ ಕೋಟ್ಯಾನ್, ವಸಂತ ಆಚಾರಿ, ಯಾಧವ ಶೆಟ್ಟಿ, ಸಂತೋಷ್ ಬಜಾಲ್, ಸುಕುಮಾರ್ ರಾವ್, ಇಮ್ತಿಯಾಝ್, ಮುನೀರ್ ಕಾಟಿಪಳ್ಳ, ಸುನಿಲ್ ಕುಮಾರ್ ಬಜಾಲ್, ಯೋಗೀಶ್ ಜಪ್ಪಿನಮೊಗರು, ಹಯವದನ ರಾವ್, ಸೀತಾರಾಮ ಬೆರಿಂಜ ಎಂಬವರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ ಎಂದು ತಿಳಿದುಬಂದಿದೆ.