
ಹೊಸದಿಲ್ಲಿ : ಅಲಿಗಢ ಮುಸ್ಲಿಂ ವಿವಿಯ ಅಲ್ಪಸಂಖ್ಯಾತ ಸ್ಥಾನಮಾನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಏಳು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠವು ಶುಕ್ರವಾರ ನಾಲ್ಕು ಪ್ರತ್ಯೇಕ ತೀರ್ಪುಗಳನ್ನು ನೀಡಿದೆ. ಹೌದು ಅಲಿಗಡ ಮುಸ್ಲಿಂ ವಿಶ್ವವಿದ್ಯಾಲಯದ “ಅಲ್ಪಸಂಖ್ಯಾತ ಸ್ಥಾನಮಾನ’ವನ್ನು ತೆಗೆದುಹಾಕಿದ್ದ 1967ರ ಮಹತ್ವದ ಆದೇಶವನ್ನು ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠ ಶುಕ್ರವಾರ ರದ್ದುಗೊಳಿಸಿದೆ.



ಏಳು ಸದಸ್ಯರ ನ್ಯಾಯಮೂರ್ತಿಗಳಲ್ಲಿ 4:3ರ ಅಭಿಪ್ರಾಯ ವ್ಯಕ್ತವಾಗಿದೆ. ಆದರೆ ಈ ಮಾನ್ಯತೆಯನ್ನು ವಿವಿಗೆ ಮರಳಿ ಸ್ಥಾಪಿಸಬೇಕೆಂದರೆ ಮೂವರು ಸದಸ್ಯರ ಸಾಮಾನ್ಯ ನ್ಯಾಯಪೀಠ ನಿರ್ಧರಿಸಬಹುದಾಗಿದೆ ಎಂದು ಅದು ಹೇಳಿದೆ. ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ನ್ಯಾಯಪೀಠವು ಅಲ್ಪಸಂಖ್ಯಾತ ಮಾನ್ಯತೆಯನ್ನು ಎತ್ತಿಹಿಡಿಯುವ ಪರವಾಗಿ ಬಹುಮತದ ತೀರ್ಪು ನೀಡಿದೆ. ಶುಕ್ರವಾರ ಸಿಜೆಐ ಹುದ್ದೆಯಲ್ಲಿ ಚಂದ್ರಚೂಡ್ ಅವರ ಕೊನೆಯ ದಿನವಾಗಿದೆ. ಕಾನೂನಿಗೆ ಒಳಪಟ್ಟ ಸಂಸ್ಥೆಯೊಂದು ಅಲ್ಪಸಂಖ್ಯಾತ ಮಾನ್ಯತೆಯನ್ನು ಪ್ರತಿಪಾದಿಸುವಂತೆ ಇಲ್ಲ ಎಂಬ ಸುಮಾರು ನಾಲ್ಕೂವರೆ ದಶಕಗಳ ಹಿಂದಿನ ತೀರ್ಪನ್ನು ರದ್ದುಗೊಳಿಸಿದೆ. ಆದರೂ ಇದನ್ನು ಮರಳಿ ಸ್ಥಾಪಿಸಬೇಕು ಎಂದರೆ ಅಲಿಗಡ ಮುಸ್ಲಿಂ ವಿವಿಯು ಸಾಮಾನ್ಯ ಪೀಠದ ಮುಂದೆ ಹೋಗಬೇಕಿದೆ. ನಿರ್ಗಮಿತ ಸಿಜೆಐ ಡಿವೈ ಚಂದ್ರಚೂಡ್, ಮುಂದಿನ ಸಿಜೆಐ ಸಂಜೀವ್ ಖನ್ನಾ, ಜೆಬಿ ಪರ್ಡಿವಾಲಾ ಮತ್ತು ಮನೋಜ್ ಮಿಶ್ರಾ ಅವರು ಹಿಂದಿನ ತೀರ್ಪನ್ನು ರದ್ದುಗೊಳಿಸುವ ಪರವಾಗಿ ತೀರ್ಪು ನೀಡಿದರೆ, ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ದಿಪಾಂಕರ್ ದತ್ತಾ ಮತ್ತು ಎಸ್‌ಸಿ ಶರ್ಮಾ ಅವರು ಇದಕ್ಕೆ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಿದರು. ಆದರೆ ಏಳು ಸದಸ್ಯರಲ್ಲಿ 4:3ರ ಬಹುಮತದ ಕಾರಣ, ಹಿಂದಿನ ತೀರ್ಪು ರದ್ದುಗೊಳಿಸುವ ನಿರ್ಧಾರ ಜಾರಿಯಾಗಲಿದೆ. ನ್ಯಾಯಪೀಠವು ಫೆಬ್ರವರಿ 1ರಂದು ತನ್ನ ತೀರ್ಪನ್ನು ಕಾಯ್ದಿರಿಸಿತ್ತು. 1967ರಲ್ಲಿ ಅಜೀಜ್ ಬಾಷಾ Vs ಕೇಂದ್ರ ಸರ್ಕಾರದ ಪ್ರಕರಣದ ತೀರ್ಪು ನೀಡಿದ ಸುಪ್ರೀಂ ಕೋರ್ಟ್, ಕಾನೂನಿನ ಅಡಿಯಲ್ಲಿ ಸ್ಥಾಪನೆಯಾದ ಸಂಸ್ಥೆಯಾಗಿರುವ ಕಾರಣ ಅಲಿಗಡ ಮುಸ್ಲಿಂ ವಿವಿಯು ಅಲ್ಪಸಂಖ್ಯಾತ ಸ್ಥಾನಮಾನ ಪ್ರತಿಪಾದಿಸುವಂತೆ ಇಲ್ಲ ಎಂದು ಹೇಳಿತ್ತು. ಮುಸ್ಲಿಮರ ಪ್ರಯತ್ನದ ಕಾರಣದಿಂದ ಎಎಂಯು ಸ್ಥಾಪನೆಯಾದರೂ, ಅದು ಅಲ್ಪಸಂಖ್ಯಾತರಿಂದ ಸ್ಥಾಪನೆಯಾಗಿದ್ದಲ್ಲ ಅಥವಾ ಅವರಿಂದ ಆಡಳಿತ ನಡೆಯುತ್ತಿಲ್ಲ. ವಿವಿಯ ಆಡಳಿತ ಕಾನೂನು ಅದನ್ನು ಅಲ್ಪಸಂಖ್ಯಾತವಲ್ಲದ ಸಂಸ್ಥೆಯನ್ನಾಗಿಸಿದೆ. ಅಲ್ಪಸಂಖ್ಯಾತ ಸಂಸ್ಥೆಯಾಗಲು ಅದನ್ನು ಅಲ್ಪಸಂಖ್ಯಾತರು ಮಾತ್ರವೇ ಸ್ಥಾಪಿಸಬೇಕು ಹಾಗೂ ಅಲ್ಪಸಂಖ್ಯಾತ ಸದಸ್ಯರೇ ಅದರ ಆಡಳಿತ ನಡೆಸುವುದು ಅಗತ್ಯ. ಅಲ್ಪಸಂಖ್ಯಾತ ಸಂಸ್ಥೆಗಳು ಜಾತ್ಯತೀತ ಶಿಕ್ಷಣಕ್ಕೆ ಒತ್ತು ನೀಡಲು ಬಯಸಬಹುದಾಗಿದೆ. ಅದಕ್ಕೆ ಅಲ್ಪಸಂಖ್ಯಾತ ಸದಸ್ಯರು ಆಡಳಿತದಲ್ಲಿ ಇರುವ ಅಗತ್ಯವಿಲ್ಲ ಎಂದು ಕೋರ್ಟ್ ತೀರ್ಪು ನೀಡಿತ್ತು. ಆದರೆ ಇದನ್ನು ಈಗ ತಿರಸ್ಕರಿಸಿರುವ ಸಾಂವಿಧಾನಿಕ ಪೀಠ, ಸಂಸ್ಥೆಯೊಂದನ್ನು ನಿಯಂತ್ರಿಸಲು ಅಥವಾ ಆಡಳಿತ ನಡೆಸುವ ಸಲುವಾಗಿ ಸರ್ಕಾರ ಕಾನೂನು ತಂದ ಮಾತ್ರಕ್ಕೆ ಅದು ತನ್ನ ಅಲ್ಪಸಂಖ್ಯಾತ ಸ್ಥಾನಮಾನ ಕಳೆದುಕೊಳ್ಳುವುದಿಲ್ಲ ಎಂದು ಹೇಳಿದೆ.