ಮಂಗಳೂರು: ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಮಂಗಳವಾರ ಇತಿಹಾಸ ಪ್ರಸಿದ್ಧ ಉಪ್ಪಿನಂಗಡಿ ಸಮೀಪದ ಜೋಗಿಬೆಟ್ಟು ರಿಫಾಯೀ ಜುಮಾ ಮಸೀದಿಯಲ್ಲಿ ತನ್ನ ತೂಕದಷ್ಟು ಸಕ್ಕರೆ ದಾನ ಮಾಡಿದರು. ತಮ್ಮ ಅಭಿಮಾನಿಗಳು ಹೊತ್ತಿರುವ ಹರಕೆಯನ್ನು ತುಲಾಭಾರ ನಡೆಸಿ ತನ್ನಷ್ಟೇ ತೂಕದ ಸಕ್ಕರೆಯನ್ನು ದಾನ ಮಾಡಿದರು. 80 ಕಿಲೋ ಗ್ರಾಂ ಖಾದರ್ ತೂಕದಷ್ಟು ಸಕ್ಕರೆ ಹರಕೆ ಸಲ್ಲಿಸಲಾಯಿತು. ಈ ವೇಳೆ 20 ಕಿಲೋಗ್ರಾಂ ಖಾದರ್ ಪುತ್ರಿ ಹವ್ವಾ ಅವರ ಭವಿಷ್ಯಕ್ಕಾಗಿ ಸಕ್ಕರೆ ಹರಕೆ ಸಲ್ಲಿಸಲಾಯಿತು. ಜೋಗಿಬೆಟ್ಟು ಮಸೀದಿ ಅಧ್ಯಕ್ಷ ಎಂ.ಜಿ. ಅಬೂಬಕರ್ ಪುತ್ತು ಅವರ “ರಿಫಾಯೀ ಮಹಲ್” ಮನೆಗೆ ಖಾಸಗಿ ಭೇಟಿ ನೀಡಿದ ಸಂದರ್ಭ ಸ್ಪೀಕರ್ ಮಸೀದಿಗೆ ತೆರಳಿದರು. ಕಾರುಣ್ಯ ಸೇವೆಯಲ್ಲಿ ಮುಂಚೂಣಿಯಲ್ಲಿದ್ದ ಔಲಿಯಾ ನೇತಾರ ಶೈಖ್ ರಿಫಾಯೀ (ರ.ಅ.) ರವರ ಹೆಸರಲ್ಲಿ ಕಾರ್ಯಾಚರಿಸುತ್ತಿರುವ ಬೆಳ್ತಂಗಡಿ ತಾಲೂಕಿನ ಗಡಿಪ್ರದೇಶದ ಉಪ್ಪಿನಂಗಡಿಯ ಜೋಗಿಬೆಟ್ಟು ರಿಫಾಯೀ ಜುಮಾ ಮಸೀದಿ “ಸಕ್ಕರೆ ಹರಕೆ”ಗೆ ಪ್ರಸಿದ್ಧಿ ಪಡೆದಿದೆ. ಒಳ್ಳೆಯ ಕಾರ್ಯಕ್ಕಾಗಿ, ಇಷ್ಟಾರ್ಥ ಸಿದ್ಧಿಗಾಗಿ ಮತ್ತು ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ರಾಜ್ಯಾದ್ಯಂತ ಜಾತಿ ಮತ ಭೇದವಿಲ್ಲದೇ ಇಲ್ಲಿ ಸಕ್ಕರೆ ದಾನ ಮಾಡುತ್ತಾರೆ. ಇದರಿಂದ ಅದ್ಭುತವಾದ ಫಲಿತಾಂಶ, ಯಶಸ್ಸನ್ನು ಕೂಡಾ ಕಾಣುತ್ತಾರೆ. ಪ್ರತಿವರ್ಷ ಈ ಮಸೀದಿಯಲ್ಲಿ ನಡೆಯುವ ರಿಫಾಯೀ ರಾತೀಬ್‌ಗೆ ಭಕ್ತಾದಿಗಳು ಆಗಮಿಸಿ ಸಕ್ಕರೆ ಹರಕೆ ಸಲ್ಲಿಸುವುದು ಹಿಂದಿನ ಕಾಲದಿಂದಲೂ ಆಚರಣೆಯಲ್ಲಿದೆ. ಯು.ಟಿ. ಖಾದರ್ ಅವರು ಸ್ಪೀಕರ್ ಆಗುವ ಸಂದರ್ಭ “ನೇರ್ಚೆ”(ಹರಕೆ) ಹೊತ್ತಿದ್ದ ಖಾದರ್ ಅಭಿಮಾನಿಗಳು ಅಭಿಮಾನಿಗಳು ಇಂದು ಸಲ್ಲಿಸಿದ್ದಾರೆ. ಜೋಗಿಬೆಟ್ಟು ಜಮಾಅತ್ ಪರವಾಗಿ ಸ್ಪೀಕರ್ ಅವರಿಗೆ ಶಾಲು ಹೊದಿಸಿ ಸಾಂಪ್ರದಾಯಿಕ ಟೋಪಿ ತೊಡಿಸಿ ಗೌರವಿಸಲಾಯಿತು.