

ಉಳ್ಳಾಲ: ಆಟೋ ರಿಕ್ಷಾ ಒಂದು ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಮಂಗಳೂರು ಹೊರವಲಯದ ಉಳ್ಳಾಲ ಕೊಣಾಜೆ ಪುಳಿಂಚಾಡಿ ಇಳಿಜಾರು ಪ್ರದೇಶದಲ್ಲಿ ಭಾನುವಾರ ಸಂಜೆ ಸಂಭವಿಸಿದೆ.
ಆಟೋದಲ್ಲಿದ್ದ ಮತ್ತಿಬ್ಬರು ಗಂಭೀರಗಾಯಗೊಂಡಿದ್ದಾರೆ. ಕುಂಬಳೆ ಮಂಜತ್ತಡ್ಕ ನಿವಾಸಿ ನಾರಾಯಣ ಗಟ್ಟಿ (50) ಮೃತ ದುರ್ದೈವಿಯಾಗಿದ್ದಾರೆ. ಸಂಬಂಧಿಕರೊಬ್ಬರ ಆರೋಗ್ಯ ವಿಚಾರಿಸಲೆಂದು ಕೊಣಾಜೆ ಪುಳಿಂಚಾಡಿಯ ಕಲ್ಕಾರ್ ಎಂಬಲ್ಲಿಗೆ ನಾರಾಯಣ ಗಟ್ಟಿ ಅವರು ಆಟೋ ಒಂದರಲ್ಲಿ ತೆರಳಿದ್ದರು. ಅಲ್ಲಿ ಇಳಿಜಾರು ಪ್ರದೇಶದಲ್ಲಿ ಆಟೋ ಇಳಿಯುತ್ತಿದ್ದಂತೆ ಬ್ರೇಕ್ ವೈಫಲ್ಯಕ್ಕೀಡಾಗಿ ಮರವೊಂದಕ್ಕೆ ಢಿಕ್ಕಿ ಹೊಡೆದಿದೆ. ಈ ವೇಳೆ ಗಂಭೀರ ಗಾಯಗೊಂಡ ನಾರಾಯಣ ಗಟ್ಟಿ ಅವರುಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆಟೋದಲ್ಲಿದ್ದ ಸಂಬಂಧಿ ಮಹಿಳೆ, ಅವರ ಪುತ್ರ ಹಾಗೂ ಇನ್ನೋರ್ವರಿಗೆ ಗಾಯಗಳಾಗಿವೆ. ನಾರಾಯಣ ಗಟ್ಟಿ ಅವರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






