
ಮದುವೆಗೆ ನಿರಾಕರಿಸಿದ ಪ್ರೇಯಸಿಗೆ ಯುವಕನೊಬ್ಬ ಚಾಕು ಇರಿದ ಘಟನೆ ಹಾಸನದ ಆಲೂರು ಪಟ್ಟಣದಲ್ಲಿ ನಡೆದಿದೆ.ಆಲೂರಿನ ಕಾರಗೋಡು ಗ್ರಾಮದ ಮೋಹಿತ್ ಹಾಗೂ ಅದೇ ಗ್ರಾಮದ ಯುವತಿ ಪರಸ್ಪರ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಕೆಲವು ದಿನಗಳಿಂದ ಮೋಹಿತ್‍ನಿಂದ ಯುವತಿ ದೂರವಾಗಿದ್ದಳು. ಆದರೂ ಪ್ರೇಯಸಿಯನ್ನು ಮದುವೆಯಾಗುವಂತೆ ಯುವಕ ಕಾಡುತ್ತಿದ್ದ ಎಂದು ತಿಳಿದು ಬಂದಿದೆ.



ಯುವಕನ ಕಾಟದಿಂದ ಬೇಸತ್ತಿದ್ದ ಯುವತಿ, ಈ ಬಗ್ಗೆ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಳು. ಬಳಿಕ ಎರಡೂ ಕುಟುಂಬದಿಂದ ರಾಜಿ ಸಂಧಾನಕ್ಕೆ ಮುಂದಾಗಿದ್ದರು. ಈ ಸಂಬಂಧ ಎರಡು ಕುಟುಂಬಗಳು ಯಾರ ತಂಟೆಗೂ ಯಾರು ಬರದಂತೆ ಮಾತುಕತೆ ನಡೆಸಿದ್ದರು. ಬಳಿಕ ಗ್ರಾಮಸ್ಥರ ಜೊತೆಗೆ ಬಂದು ನೋಟರಿ (ದಸ್ತಾವೇಜು) ಮಾಡಿಸಲು ಎರಡು ಕುಟುಂಬಸ್ಥರು ಬಂದಿದ್ದರು. ಈ ವೇಳೆ ಪಾನಮತ್ತನಾಗಿ ಬಂದಿದ್ದ ಯುವಕ ಏಕಾಏಕಿ ಯುವತಿಯ ಮೇಲೆ ಮಾರಕಾಸ್ತ್ರದಿಂದ ದಾಳಿ ನಡೆಸಿದ್ದಾನೆ. ಹಲ್ಲೆಯ ಬಳಿಕ ಆರೋಪಿ ಪರಾರಿಯಾಗಿದ್ದಾನೆ.
ದಾಳಿಯಿಂದ ಯುವತಿಯ ತಲೆ ಹಾಗೂ ಕೈಗಳಿಗೆ ತೀವ್ರ ಗಾಯಗಳಾಗಿವೆ. ಗಾಯಳುವಿಗೆ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಆಲೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.