August 30, 2025
WhatsApp Image 2024-11-27 at 9.30.31 AM

ಬೆಂಗಳೂರು: ಮುಸ್ಲಿಂ ಸಮುದಾಯಕ್ಕೆ ಓಟಿನ ಪವರ್‌ ಇಲ್ಲವೆಂದು ಕಾನೂನು ಮಾಡಬೇಕು ಎಂದು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರ ಸ್ವಾಮೀಜಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮಂಗಳವಾರ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಭಾರತೀಯ ಕಿಸಾನ್ ಸಂಘದ ನೇತೃತ್ವದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತಾಡಿದರು.

ಪಾಕಿಸ್ತಾನದಲ್ಲಿ ಅವರನ್ನು ಬಿಟ್ಟು ಬೇರೆಯವರಿಗೆ ಓಟಿನ ಹಕ್ಕು ಇಲ್ಲದಂತೆ ಮಾಡಿದ್ದಾರೆ, ಅದೇ ರೀತಿ ಭಾರತದಲ್ಲಿ ಕೂಡಾ ಮುಸ್ಲಿಮರಿಗೆ ಮತದಾನದ ಹಕ್ಕು ರದ್ದುಪಡಿಸಿದರೆ ಅವರ ಪಾಡಿಗೆ ಅವರು ಇರುತ್ತಾರೆ. ಖಂಡಿತವಾಗಿ ಎಲ್ಲರೂ ನೆಮ್ಮದಿಯಿಂದ ಇರಲು ಸಾಧ್ಯ. ಜನರು ಇದರ ವಿರುದ್ಧ ದನಿ ಎತ್ತಬೇಕು. ವಕ್ಫ್‌ ಮಂಡಲಿ ಕಾನೂನಿನ ಭಯ ಇಲ್ಲದೆ ಮತ್ತೊಬ್ಬರ ಜಮೀನು, ಕಟ್ಟಡ, ಆಸ್ತಿ ಕಬಳಿಸುತ್ತಿದ್ದಾರೆ, ಆದರೆ ಇದು ಅನ್ಯಾಯ. ಯಾರದ್ದೋ ವಸ್ತುವನ್ನು ಮತ್ತ್ಯಾರೋ ಕಸಿದುಕೊಳ್ಳುವುದು ಧರ್ಮ ಅಲ್ಲ, ಏಕೆಂದರೆ ಅವರ ವಸ್ತುವನ್ನು ನಾವು ಕಿತ್ತುಕೊಂಡರೆ ಅವರು ಸುಮ್ಮನಿರುತ್ತಾರೆಯೇ? ಬಿಡುವುದಿಲ್ಲ, ಆದ್ದರಿಂದ ಇದರ ಬಗ್ಗೆ ಎಲ್ಲರೂ ಸೇರಿ ಹೋರಾಟ ಮಾಡಿ ರೈತರ ಜಮೀನನ್ನು ರೈತರಿಗೆ ಒದಗಿಸಿಕೊಡಬೇಕು.

ರೈತ ಪ್ರಪಂಚದಲ್ಲೇ ಎಲ್ಲರಿಗೂ ಹಸಿವು ನೀಗಿಸುವ ಅನ್ನದಾತ, ಆದ್ದರಿಂದ ರೈತನನ್ನು ಎಲ್ಲರೂ ಉಳಿಸಬೇಕು, ಎಲ್ಲರೂ ಬೆಳೆಸಬೇಕು. ರೈತ ಇದ್ದರೆ ಜನ ಇರ್ತಾರೆ, ಇಲ್ಲವೆಂದರು ಜನರು ಇರುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರು ರೈತನ ಬೆಂಬಲವಾಗಿ ನಿಂತು ಅವನ ಆಸ್ತಿಯನ್ನು ಕಿತ್ತುಕೊಳ್ಳದಂತೆ ನೋಡಿಕೊಳ್ಳಬೇಕು. ಈ ವಕ್ಫ್‌ ಮಂಡಲಿಯನ್ನೇ ಇಲ್ಲದಂತೆ ಮಾಡಬೇಕು. ನಮ್ಮ ರಾಜಕೀಯ ನಾಯಕರು ಎಲ್ಲವನ್ನೂ ಮಾಡುತ್ತಿರುವುದು ಓಟಿಗಾಗಿ. ನಮ್ಮ ದೇಶಕ್ಕೆ ಒಳ್ಳೆ ಹೆಸರು ಬರಬೇಕು, ಕೀರ್ತಿ ಹೆಚ್ಚಾಗಬೇಕು ಎಂದಾದಲ್ಲಿ ಮುಸ್ಲಿಂ ಜನಕ್ಕೆ ಓಟಿನ ಪವರ್‌ ನೀಡದಂತೆ ಕಾನೂನು ಮಾಡಬೇಕು ಎಂದು ಚಂದ್ರಶೇಖರ ಸ್ವಾಮೀಜಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಹಿಂದೊಮ್ಮೆ ಇದೇ ಚಂದ್ರಶೇಖರ ಸ್ವಾಮೀಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎದುರೇ, ಸಿದ್ದು ತಮ್ಮ ಸಿಎಂ ಸ್ಥಾನ ಬಿಟ್ಟುಕೊಟ್ಟು ಡಿ.ಕೆ. ಶಿವಕುಮಾರ್‌ ಅವರನ್ನು ಸಿಎಂ ಮಾಡಲಿ ಎಂದು ಹೇಳಿಕೆ ನೀಡಿದ್ದರು. ಸ್ವಾಮೀಜಿ ಹೇಳಿಕೆಯಿಂದ ಕುರುಬ ಸಮುದಾಯದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಮತ್ತೆ ಚಂದ್ರಶೇಖರ ಸ್ವಾಮೀಜಿ ವಕ್ಫ್‌, ಮುಸ್ಲಿಮರ ವಿರುದ್ಧ ಮಾತನಾಡಿ ವಿವಾದ ಸೃಷ್ಟಿಸಿದ್ದಾರೆ.

 

About The Author

Leave a Reply