ವಿಟ್ಲ: ಆಟೋರಿಕ್ಷಾ ಮತ್ತು ಬೈಕ್ ಮುಖಾಮುಖಿ ಡಿಕ್ಕಿ ಹೊಡೆದು ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಸಾಲೆತ್ತೂರು ಸಮೀಪದ ಕಾಡುಮಠ ಸೇತುವೆ ಬಳಿ ನಡೆದಿದೆ.
ಆಟೋ ಚಾಲಕ ಸಾಲೆತ್ತೂರು ನಿವಾಸಿ ರಫೀಕ್, ಬೈಕ್ ಸವಾರರಾದ ಕಡಂಬು ನಿವಾಸಿ ಉಮ್ಮರ್ ಮತ್ತು ರಾದುಕಟ್ಟೆ ನಿವಾಸಿ ಅಬೂಬಕ್ಕರ್ ಗಾಯಾಳುಗಳು ಎಂದು ತಿಳಿಯಲಾಗಿದೆ.
ಸುಂಕದಕಟ್ಟೆ ಮಜೀರ್ ಪಳ್ಳದಲ್ಲಿ ಸೆಂಟ್ರಿಂಗ್ ಕೆಲಸ ಮುಗಿಸಿ ಮನೆಗೆ ಹಿಂತಿರುತ್ತಿದ್ದ ಉಮ್ಮರ್ ಮತ್ತು ಅಬೂಬಕ್ಕರ್ ಅವರ ಬೈಕ್ ಸಾಲೆತ್ತೂರು ಕಡೆಗೆ ಸಂಚರಿಸುತ್ತಿದ್ದ ರಫೀಕ್ ಎಂಬವರ ಆಟೋಗೆ ಕಾಡುಮಠ ಸೇತುವೆಯಲ್ಲಿ ಮುಖಾಮುಖಿ ಡಿಕ್ಕಿ ಹೊಡೆದಿದೆ.
ಅಪಘಾತದ ತೀವ್ರತೆಗೆ ಆಟೋ ಮತ್ತು ಬೈಕ್ ಸಂಪೂರ್ಣ ಜಖಂಗೊಂಡು ಮೂವರೂ ರಸ್ತೆಗೆಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣವೇ ಸ್ಥಳೀಯರು ಗಾಯಾಳುಗಳನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗಾಯಾಳುಗಳ ಪೈಕಿ ಅಬೂಬಕ್ಕರ್ ಅವರ ಸ್ಥಿತಿ ಮತ್ತಷ್ಟು ಗಂಭೀರವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಈ ಕುರಿತು ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.