
ಚೀನಾದಿಂದ ಕಾಣಿಸಿಕೊಂಡ ಕೋವಿಡ್ (COVID-19) ಮಹಾಮಾರಿ ಇಡೀ ಜಗತ್ತನ್ನೇ ತಲ್ಲಣಗೊಳಿಸಿತು. ಚೀನಾದ ವುಹಾನ್ ನಗರದಲ್ಲಿ ಕಾಣಿಸಿಕೊಂಡ ಕೊರೊನಾ ಸೃಷ್ಟಿಸಿದ ಅವಾಂತರ ಅಷ್ಟಿಷ್ಟಲ್ಲ.



ಈ ಮಹಾಮಾರಿ ಕೊರೊನಾ ಸಾಂಕ್ರಾಮಿಕದ ಸುಮಾರು ಐದು ವರ್ಷಗಳ ನಂತರ ಚೀನಾದಲ್ಲಿ ಮತ್ತೊಂದು ವಿನಾಶಕಾರಿ ವೈರಸ್ ಪತ್ತೆಯಾಗಿದೆ. ಹೌದು. ಹ್ಯೂಮನ್ ಮೆಟಾಪ್ನ್ಯೂಮೋ ವೈರಸ್ (HMPV) ಏಕಾಏಕಿ ಚೀನಾದಲ್ಲಿ ಹರಡುತ್ತಿದೆ. ಇದರಿಂದಾಗಿ ಚೀನಾದಲ್ಲಿ ಕೊರೊನಾ ರೀತಿಯ ದೃಶ್ಯ ಮತ್ತೆ ಕಾಣಿಸಿಕೊಂಡಿದೆ. ಆಸ್ಪತ್ರೆಗಳಲ್ಲಿ ರೋಗಿಗಳ ದಂಡೇ ಇದೆ, ಸ್ಮಶಾನ ಸ್ಥಳಗಳೂ ಭರ್ತಿಯಾಗಿವೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋಗಳಲ್ಲಿ ಚೀನಾದ ಆಸ್ಪತ್ರೆಗಳಲ್ಲಿ ಜನಸಂದಣಿ ಕಂಡುಬರುತ್ತಿದೆ. HMPV, ಇನ್ಫ್ಲುಯೆನ್ಸ A, ಮೈಕೋಪ್ಲಾಸ್ಮಾ ನ್ಯುಮೋನಿಯಾ ಮತ್ತು Covid-19 ಸೇರಿದಂತೆ ಅನೇಕ ವೈರಸ್‌ಗಳು ಚೀನಾದಲ್ಲಿ ಏಕಕಾಲದಲ್ಲಿ ಹರಡುತ್ತಿವೆ ಎಂದು ಕೆಲವು ಬಳಕೆದಾರರು ಹೇಳುತ್ತಿದ್ದಾರೆ. HMPV ಸೋಂಕಿಗೆ ಒಳಗಾದವರಲ್ಲಿ ಕೋವಿಡ್-19 ರ ಲಕ್ಷಣಗಳಂತೆಯೇ ಕಂಡುಬರುತ್ತಿದೆ.
ಡಚ್ ಸಂಶೋಧಕರು ಈ ವೈರಸ್ ಅನ್ನು 2001ರಲ್ಲಿ ಪತ್ತೆ ಹಚ್ಚಿದ್ದರು. ಈ ವೈರಸ್ ಸುಮಾರು ಆರು ದಶಕಗಳಿಂದ ಉಳಿದುಕೊಂಡಿದೆ. ವೈರಸ್ ಹರಡುವುದನ್ನು ಆರೋಗ್ಯ ಅಧಿಕಾರಿಗಳು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಅದರಿಂದ ದೂರವಿರಲು ಕೋವಿಡ್ ಮಾದರಿಯ ಕ್ರಮಗಳನ್ನೇ ಅನುಸರಿಸುತ್ತಿದ್ದಾರೆ. ಕೊರೊನಾ ಸಂದರ್ಭದಲ್ಲಿನ ಅನುಭವಗಳನ್ನು ಗಮನದಲ್ಲಿಟ್ಟುಕೊಂಡು ಚೀನಾ ಈ ಕ್ರಮಕ್ಕೆ ಮುಂದಾಗಿದೆ.