
ಪುತ್ತೂರು-ವಿಟ್ಲ : ಪತಿಯ ಅನೈತಿಕ ಸಂಬಂಧವನ್ನು ಪ್ರಶ್ನಿಸಿದ ಪತ್ನಿಗೆ ಪತಿ ಹಾಗೂ ಆತನ ಹೆತ್ತವರು ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ್ದಲ್ಲದೆ, ಹಲ್ಲೆ ನಡೆಸಿ ಮನೆಯಿಂದ ಹೊರಗೆ ಹಾಕಿದ್ದಾರೆಂದು ವಿಟ್ಲ ಠಾಣೆಗೆ ದೂರು ನೀಡಿದ್ದಾರೆ. ವಿಟ್ಲ ಠಾಣೆ ವ್ಯಾಪ್ತಿಯ ಕೇಪು ಗ್ರಾಮದ ನೀರ್ಕಜೆ ದುರ್ಗಾನಗರದ ಶಾಲಿನಿ (29) ಅವರು ನೀರ್ಕಜೆ ನಿವಾಸಿಗಳಾದ ಪತಿ ದಿನೇಶ್ ಕುಮಾರ್, ಅತ್ತೆ ಸುಂದರಿ, ಮಾವ ಬಾಬು ಮೂಲ್ಯ, ಜಯಪ್ರಕಾಶ್ ನಾವೂರು ಬಂಟ್ವಾಳ, ವಿಟ್ಲದ ಮಂಜುಳಾ ಅವರ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಮಹಿಳಾ ದೌರ್ಜನ್ಯ ಪ್ರಕರಣ ದಾಖಲಿಸಿದ್ದಾರೆ.



ಕೇಪು ಗ್ರಾಮದ ನೀರ್ಕಜೆ ದುರ್ಗಾನಗರ ನಿವಾಸಿ ಬಾಬು ಮೂಲ್ಯ ಅವರ ಪುತ್ರ ದಿನೇಶ್ ಕುಮಾರ್ ಅವರೊಂದಿಗೆ ಶಾಲಿನಿ ಅವರ ವಿವಾಹ 2023, ಎ.30ರಂದು ನಡೆದಿತ್ತು. ಆ ಬಳಿಕ ಪತಿ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಲಾರಂಭಿಸಿದ್ದರೆಂದು ದೂರಿನಲ್ಲಿ ಆಪಾದಿಸಲಾಗಿದೆ. ಮಂಜುಳಾ ಎಂಬಾಕೆಯ ಜತೆಗೆ ಅನೈತಿಕ ಸಂಬಂಧವಿರುವುದು ಪತ್ನಿಗೆ ತಿಳಿದು ಪ್ರಶ್ನಿಸಿದ್ದಾರೆ. ಅಕ್ರಮ ಸಂಬಂಧ ವಿಷಯ ಹೊರ ಬರುತ್ತಿದ್ದಂತೆ ಶಿಕ್ಷಣ ಸಂಸ್ಥಯೊಂದರಲ್ಲಿ ಕರಾಟೆ ಮಾಸ್ಟರ್ ಆಗಿ ಕೆಲಸ ಮಾಡುತ್ತಿರುವ ದಿನೇಶ್ ಕುಮಾರ್ ಪತ್ನಿಗೆ ನಿತ್ಯ ಮಾನಸಿಕ ಕಿರುಕುಳ ನೀಡಲಾರಂಭಿಸಿದ್ದಾನೆ. ಪ್ರತಿ ನಿತ್ಯ ವಿನಾಕಾರಣಕ್ಕೆ ಜಗಳ ನಡೆಸಿ ಪತ್ನಿಗೆ ಹಲ್ಲೆ ನಡೆಸಲಾಗಿದೆ. ಇದಕ್ಕೆ ಅತ್ತೆ ಹಾಗೂ ಮಾವ ಕುಮ್ಮಕ್ಕು ನೀಡಿದ್ದಲ್ಲದೇ ಅವರು ಮಾನಸಿಕ ಹಿಂಸೆಯನ್ನು ನೀಡಿದ್ದಾರೆ. ಜಯಪ್ರಕಾಶ್ ಲೈಂಗಿಕ ದೌರ್ಜನ ನಡೆಸಿದ್ದಾರೆ. ಈ ನಡುವೆ ಡಿ.31ರಂದು ಶಾಲಿನಿ ಅವರನ್ನು ಪತಿಯು ಜಯಪ್ರಕಾಶ್ ಜತೆ ಸೇರಿ ಬಿ.ಸಿ. ರೋಡಿನ ವಕೀಲರಲ್ಲಿ ಬಲಾತ್ಕಾರದಿಂದ ಕರೆದುಕೊಂಡು ಹೋಗಿ ವಿವಾಹ ವಿಚ್ಚೇಧನ ಮಾಡುವುದಕ್ಕೆ ಮುಂದಾಗಿದ್ದಾರೆ. ಅಲ್ಲಿಂದ ತಪ್ಪಿಸಿ ಸಂಜೆ 7.30ರ ಹೊತ್ತಿಗೆ ತಾನೊಬ್ಬಳೇ ಪತಿಯ ಮನೆಗೆ ಹೋದಾಗ ಪತಿ ಮತ್ತು ಮನೆಯವರು ಸೇರಿಕೊಂಡು ಮನೆಯೊಳಗೆ ಸೇರಿಸದೆ ಅವಾಚ್ಯವಾಗಿ ನಿಂಧಿಸಿದ್ದಲ್ಲದೇ, ಕುತ್ತಿಗೆ, ಸೊಂಟ, ಹೊಟ್ಟೆಗೆ ಹೊಡೆದು ಜೀವ ಬೆದರಿಕೆ ಹಾಕಿ ಮನೆಯಿಂದ ಹೊರದಬ್ಬಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಮಾನಸಿಕ, ದೈಹಿಕ, ಲೈಂಗಿಕ ದೌರ್ಜನ್ಯ ನೀಡಿ ಹಿಂಸಿಸಿದ ಬಗ್ಗೆ ಪ್ರಕರಣ ದಾಖಲಿಸಲಾಗಿದೆ.
ಶಾಲಿನಿ ಬಂಟ್ವಾಳದ ಮಹಿಳಾ ಸಾಂತ್ವನ ಕೇಂದ್ರಕ್ಕೆ ಹೋಗಿದ್ದು, ಅವರ ಸೂಚನೆಯಂತೆ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ವರ್ಗಾವಣೆಯಾಗಿದ್ದರು. ಜ.2ರಂದು ವಿಟ್ಲ ಠಾಣೆಯಲ್ಲಿ ಮಾನಸಿಕ, ದೈಹಿಕ, ಲೈಂಗಿಕ ದೌರ್ಜನ್ಯ ನೀಡಿ ಹಿಂಸಿಸಿದ ಬಗ್ಗೆ 5 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.