November 9, 2025
WhatsApp Image 2024-08-21 at 9.38.42 AM

ಮಂಗಳೂರು: ಪಾರ್ಟಿಗೆ ಆಗಮಿಸಿದ್ದ ಯುವತಿಗೆ ಪ್ರಜ್ಞೆ ತಪ್ಪುವ ಪದಾರ್ಥ ಬೆರೆಸಿದ್ದ ವೈನ್ ನೀಡಿ ಅತ್ಯಾಚಾರ ಎಸಗಿರುವ ಅಪರಾಧಿಗೆ ಮಂಗಳೂರಿನ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 10 ವರ್ಷ ಕಠಿನ ಶಿಕ್ಷೆ ಮತ್ತು 5ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ. ಹಂಪನಕಟ್ಟೆ ಲೈಟ್‌ಹೌಸ್‌ಹಿಲ್ ರೋಡ್ ನಿವಾಸಿ ಬ್ರಯಾನ್ ರಿಚರ್ಡ್ ಅಮನ್ನಾ (34) ಶಿಕ್ಷೆಗೊಳಗಾದ ಅಪರಾಧಿ ಸಂತ್ರಸ್ತ ಯುವತಿ ಬ್ಯಾಂಕ್ ಉದ್ಯೋಗಿಯಾಗಿದ್ದು, ಆಕೆಗೆ ನೌಕಾಪಡೆಯಲ್ಲಿ ಕೆಲಸ ಮಾಡುತ್ತಿದ್ದ ಜಾಯ್‌ಲಿನ್ ಗ್ಲಾನೆಲ್ ಪಿಂಟೋ ಎಂಬಾತ ಪರಿಚಿತನಾಗಿದ್ದ.

ಆತನಿಗೆ ಅಂಡಮಾನ್‌ಗೆ ವರ್ಗಾವಣೆಯಾದ ಹಿನ್ನೆಲೆಯಲ್ಲಿ 2021ರ ಫೆ.5ರಂದು ಸ್ನೇಹಿತರಿಗಾಗಿ ಪುತ್ತೂರಿನ ಕೊಡಿಪ್ಪಾಡಿ ಗ್ರಾಮದ ಕೊಡಿಕಾಡು ಎಂಬಲ್ಲಿನ ಮನೆಯೊಂದರಲ್ಲಿ ಪಾರ್ಟಿ ಆಯೋಜಿಸಲಾಗಿತ್ತು. ಈ ಪಾರ್ಟಿಯಲ್ಲಿ ಯುವತಿಯೂ ಭಾಗವಹಿಸಿದ್ದರು. ಈ ಪಾರ್ಟಿಗೆ ಕ್ಯಾಟರಿಂಗ್ ಸರಬರಾಜಿನ ವ್ಯವಸ್ಥೆ ಮಾಡಿದ್ದ ಬ್ರಯಾನ್ ಅಮನ್ನಾ ಯುವತಿಗೆ ತನ್ನನ್ನು ಜಾಯಿಲಿನ್ ಸ್ನೇಹಿತ ಎಂದು ಪರಿಚಯಿಸಿಕೊಂಡಿದ್ದ. ಬಳಿಕ ವೈನ್‌ಗೆ ಪ್ರಜ್ಞೆ ತಪ್ಪುವ ಅಮಲು ಪದಾರ್ಥವನ್ನು ಬೆರೆಸಿ ಅದನ್ನು ಯುವತಿಗೆ ಒತ್ತಾಯಪಡಿಸಿ ನೀಡಿದ್ದ. ಬಳಿಕ ಯುವತಿ ಕೊಠಡಿಗೆ ಹೋಗಿ ನಿದ್ದೆ ಮಾಡಿದ್ದಳು. 5ಗಂಟೆ ವೇಳೆ ಎಚ್ಚರವಾದಾಗ ಬ್ರಯಾನ್ ಅಮನ್ನಾ ಆಕೆಯ ಮೇಲೆ ಅತ್ಯಾಚಾರ ನಡೆಸಿ ಎಸಗುತ್ತಿದ್ದ.

ಅದರಂತೆ ಆತನ ವಿರುದ್ಧ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಠಾಣಾ ನಿರೀಕ್ಷಕ ತಿಮ್ಮಪ್ಪ ನಾಯ್ಕ ತನಿಖೆ ಪೂರ್ಣಗೊಳಿಸಿ ಬ್ರಯಾನ್ ಅಮನ್ನಾ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ 6ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಾಂತರಾಜು ಎಸ್.ವಿ. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಐಪಿಸಿ ಸೆಕ್ಷನ್ 376ರಡಿ 10ವರ್ಷ ಕಠಿನ ಕಾರಾಗೃಹವಾಸ ಶಿಕ್ಷೆ ಮತ್ತು 10ಸಾವಿರ ರೂ. ದಂಡ, ಕಲಂ 378ರಡಿ 5ವರ್ಷ ಕಾರಾಗೃಹವಾಸದ ಶಿಕ್ಷೆ ಮತ್ತು 5ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ನೊಂದ ಯುವತಿಗೆ ಸೂಕ್ತ ಪರಿಹಾರ ನೀಡುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದ್ದಾರೆ. ಸರಕಾರದ ಪರವಾಗಿ ಭಾಗಶಃ ಸಾಕ್ಷಿ ವಿಚಾರಣೆಯನ್ನು ಸರಕಾರಿ ಅಭಿಯೋಜಕ ಬಿ.ಶೇಖರ ಶೆಟ್ಟಿ ನಡೆಸಿದ್ದು, ಸರಕಾರಿ ಅಭಿಯೋಜಕ ಚೌಧರಿ ಮೋತಿಲಾಲ್ ಉಳಿದ ಸಾಕ್ಷಿ ವಿಚಾರಣೆ ನಡೆಸಿದ್ದಾರೆ.

About The Author

Leave a Reply