
ಮಂಗಳೂರು: ಬಿಯರ್ ಬಾಟಲಿಯಿಂದ ಇತ್ತಂಡಗಳ ನಡುವೆ ಹಲ್ಲೆ ನಡೆದಿರುವ ಘಟನೆಯೊಂದು ಪಣಂಬೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಲೈಟರ್ ವಿಚಾರಕ್ಕೆ ವಾಗ್ವಾದ ನಡೆದು, ಗಲಾಟೆ ಪ್ರಾರಂಭವಾಗಿ ಹೊಡೆದಾಟ, ಹಲ್ಲೆ ನಡೆದಿದೆ.



ಭಾನುವಾರ (ಜ.12) 11.45 ರ ತಡರಾತ್ರಿ ಈ ಘಟನೆ ನಡೆದಿದೆ. ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಗಣೇಶ ಕಟ್ಟೆ, ತಣ್ಣೀರುಬಾವಿ ಎಂಬಲ್ಲಿ ವೆಂಕಟೇಶ, ಕಾರ್ತಿಕ್, ಸಂತೋಷ್, ಸೈಫ್, ಧನುಷ್ ಇವರುಗಳು ಮದ್ಯಪಾನ ಮಾಡಿ ಸಿಗರೇಟು ಸೇದುತ್ತಿದ್ದಾಗ ಅವರಿದ್ದ ಸ್ಥಳಕ್ಕೆ ಬಂದ ಪ್ರೀತಂ ಮತ್ತು ಸನ್ವೀತ್ ಹಾಗೂ ಇತರರು ಸಿಗಾರ್ ಲೈಟರ್ ಕೇಳಿದ್ದು, ಈ ವೇಳೆ ಪ್ರಜ್ವಲ್ ಲೈಟರ್ ಪ್ರೀತಂಗೆ ನೀಡಿದ್ದು, ಅನಂತರ ವಾಪಾಸು ನೀಡದ್ದಕ್ಕೆ ಪ್ರಜ್ವಲ್ ಪ್ರಶ್ನೆ ಮಾಡಿದ್ದಾನೆ.
ಇದಕ್ಕೆ ಇನ್ನೊಂದು ಗುಂಪು ಸಿಟ್ಟಿಗೆದ್ದಿದ್ದು, ನೀವು ಯಾಕೆ ಧಮ್ಕಿ ಹಾಕುತ್ತೀರಿ ಎಂದು ಪ್ರಜ್ವಲ್ ಜೊತೆಗಿದ್ದ ಕಾರ್ತಿಕ್ ತಲೆಗೆ ಬಿಯರ್ ಬಾಟಲಿಯಿಂದ ಹೊಡೆದಿದ್ದು, ಅವರ ಜೊತೆಗಿದ್ದ ಐದು ಜನರು ಅಲ್ಲೇ ಇದ್ದ ಮರದ ಕೋಲುಗಳಿಂದ ಪ್ರಜ್ವಲ್, ಕಾರ್ತಿಕ್, ಸಂತೋಷ್, ಸೈಫ್, ಧನುಷ್ ಎಂಬುವವರ ಮೇಲೆ ಹಲ್ಲೆ ಮಾಡಿದ್ದಾರೆ. ಹಾಗಾಗಿ ಎರಡು ತಂಡಗಳ ನಡುವೆ ಗಲಾಟೆ ನಡೆದಿದೆ.
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪಣಂಬೂರು ಠಾಣೆಯಲ್ಲಿ 2 ಪ್ರತ್ಯೇಕ ಪ್ರಕರಣಗಳು ದಾಖಲಾಗಿದೆ.
ಪ್ರೀತಂ ಎಂಬಾತ ದೂರು ನೀಡಿದ್ದು, ಬಿ.ಎನ್.ಎಸ್ ಪ್ರಕಾರ ಪ್ರಕರಣ ದಾಖಲಾಗಿದ್ದು, ಇದರಲ್ಲಿ ವೆಂಕಟೇಶ್, ಕಾರ್ತಿಕ್, ಸಂತೋಷ್, ಸೈಪ್, ಧನುಷ್, ಪ್ರಜ್ವಲ್ ಇವರು ಆರೋಪಿಗಳಾಗಿದ್ದು, ಇವರಲ್ಲಿ ಕಾರ್ತಿಕ್, ಸಂತೋಷ್, ಧನುಷ್, ಪ್ರಜ್ವಲ್ ಇವರನ್ನು ಪೊಲೀಸರು ದಸ್ತಗಿರಿ ಮಾಡಿದ್ದಾರೆ.