
ಮಂಗಳೂರು: ನಗರದ ಜೈಲಿನಲ್ಲಿ ಕೈದಿಗಳು ಜೈಲು ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದ್ದು, ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



ಮಂಗಳೂರಿನ ಜಿಲ್ಲಾ ಕಾರಾಗೃಹದ ‘ಎ’ ಬ್ಲಾಕ್‌ನ ಸೆಲ್‌ಗಳಲ್ಲಿ ನಿಷೇಧಿತ ವಸ್ತುಗಳಿರುವ ಶಂಕೆಯ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿ ಜೈಲು ಸಿಬ್ಬಂದಿ ತಪಾಸಣೆಗೆ ತೆರಳಿದ್ದರು. ಈ ವೇಳೆ ವಿಚಾರಣಾಧೀನ ಕೈದಿಗಳು ಬೆದರಿಕೆಯೊಡ್ಡಿ ಕರ್ತವ್ಯಕ್ಕೆ ಅಡ್ಡಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಜೈಲಿನಲ್ಲಿ ಮೊಬೈಲ್, ಗಾಂಜಾ ಮೊದಲಾದ ನಿಷೇಧಿತ ವಸ್ತುಗಳಿರುವ ಶಂಕೆಯಿಂದ ಜೈಲು ಅಧೀಕ್ಷಕ ಎಂ.ಎಚ್.ಆಶೇಖಾನ್ ನೇತೃತ್ವದಲ್ಲಿ ತಪಾಸಣೆಗೆ ಮುಂದಾಗಿದ್ದರು. ಆಗ ಪಾತ್ರೆ ಮತ್ತಿತರ ವಸ್ತುಗಳಿಂದ ವಿಚಾರಣಾ ಕೈದಿಗಳು ಹಲ್ಲೆಗೆ ಮುಂದಾಗಿದ್ದಾರೆ. ಅಲ್ಲದೆ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಒಡ್ಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಬರ್ಕೆ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.