
ಮಂಗಳೂರಿನ ಗಾಳಿಪಟ ಉತ್ಸವವನ್ನು ಪ್ರವಾಸೋದ್ಯಮಕ್ಕೆ ಪೂರಕವಾಗಿಸುವುದರ ಜೊತೆಗೆ ಒಂದು ಕ್ರೀಡೆಯನ್ನಾಗಿಯೂ ಬೆಳೆಸಬಹುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಮಂಗಳೂರಿನ ತಣ್ಣೀರ್ ಬಾವಿ ಬೀಚ್ ನಲ್ಲಿ ಇಂದು 8 ನೇ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಚಾಲನೆ ನೀಡಿ ಸಚಿವರು ಮಾತನಾಡುತ್ತಿದ್ದರು.



ಸಾಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಬಂದು ಗಾಳಿಪಟ ಉತ್ಸವದಲ್ಲಿ ಪಾಲ್ಗೊಂಡು ಸಂಭ್ರಮಿಸುತ್ತಿದ್ದಾರೆ. ವಿದೇಶಗಳಿಂದ ಹಲವು ಪ್ರವಾಸಿಗರು ಈ ಬಾರಿಯ ಗಾಳಿಪಟ ಉತ್ಸವದಲ್ಲಿ ಪಾಲ್ಗೊಂಡು ಮೆರಗು ನೀಡಿದ್ದಾರೆ. ಗಾಳಿಪಟ ವರ್ಲ್ಡ್ ಚಾಂಪಿಯನ್ ಶಿಪ್ ಗೆದ್ದಿರುವ ಗ್ರೀಸ್ ದೇಶದವರು ಒಬ್ಬರು ಇಲ್ಲಿಗೆ ಬಂದು ಗಾಳಿಪಟ ಹಾರಿಸಲು ತೋರುತ್ತಿರುವ ಉತ್ಸುಕತೆ ನೋಡಿದಾಗ ಮುಂಬರುವ ವರ್ಷದಲ್ಲಿ ಗಾಳಿಪಟ ಉತ್ಸವ ಇನ್ನಷ್ಟು ಜನಾಕರ್ಷಣೆ ಗಳಿಸಲಿದೆ ಎಂದರು.. ಮುಂದಿನ ವರ್ಷದಲ್ಲಿ ಗಾಳಿಪಟ ಉತ್ಸವವನ್ನ ಸ್ಪರ್ಧಾತ್ಮಕ ರೀತಿಯಲ್ಲಿ ದೊಡ್ಡ ಮಟ್ಟದಲ್ಲಿ ಆಯೋಜಿಸೋಣ ಎಂದ ಕರೆ ನೀಡಿದರು.
ದೇಶ ವಿದೇಶಗಳಿಂದ ಗಾಳಿಪಟ ಉತ್ಸವದಲ್ಲಿ ಪಾಲ್ಗೊಂಡಿದ್ದ ಪ್ರವಾಸಿಗರನ್ನ ಮಾತನಾಡಿಸಿದ ಸಚಿವ ದಿನೇಶ್ ಗುಂಡೂರಾವ್, ಉತ್ಸವದ ಬಗ್ಗೆ ಪ್ರವಾಸಿಗರ ಅಭಿಪ್ರಾಯ ಆಲೀಸಿದರು. ದೇಶದಲ್ಲಿಯೇ ಗಾಳಿಪಟ ಹಾರಿಸಲು ಇದಕ್ಕಿಂತ ಉತ್ತಮ ಸ್ಥಳವಿಲ್ಲ. ಇದೇ ರೀತಿಯಲ್ಲಿ ಉತ್ಸವವನ್ನ ಮುಂದುವರಿಸುವಂತೆ ಸಚಿವರಿಗೆ ಪ್ರವಾಸಿಗರು ಮನವಿ ಮಾಡಿದರು. ತಣ್ಣೀರ್ ಬಾವಿ ಪ್ರದೇಶದಲ್ಲಿ ಬೀಸುವ ಗಾಳಿ ಗಾಳಿಪಟ ಹಾರಾಟಕ್ಕೆ ಸೂಕ್ತವಾಗಿದೆ. ಜಗತ್ತಿನಲ್ಲಿಯೇ ಗಾಳಿಪಟ ಹಾರಿಸಲು ಇರುವ ಉತ್ತಮ ಸ್ಥಳಗಳಲ್ಲಿ ಮಂಗಳೂರಿನ ತಣ್ಣೀರ್ ಬಾವಿ ಕೂಡ ಪ್ರಮುಖ ಸ್ಥಳವಾಗಿದೆ ಎಂದು ಪ್ರವಾಸಿಗರು ಸಚಿವರೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.
ಟೀಮ್ ಮಂಗಳೂರು, ಹವ್ಯಾಸಿ ಗಾಳಿಪಟ ತಂಡವು ONGC MRPL ನ ಪ್ರಾಯೋಜಕತ್ವದಲ್ಲಿ ‘ ಕರಾವಳಿ ಉತ್ಸವ’ ದ ಅಂಗವಾಗಿ ಜಿಲ್ಲಾಡಳಿತದ ಸಹಕಾರದೊಂದಿಗೆ ಮಂಗಳೂರಿನ ತಣ್ಣೀರ್ ಬಾವಿ ಕಡಲ ಕಿನಾರೆಯಲ್ಲಿ ಜನವರಿ 18 ಮತ್ತು 19 ಎರಡು ದಿನಗಳ ಗಾಳಿಪಟ ಉತ್ಸವವನ್ನು ಅಚ್ಚುಕಟ್ಟಾಗಿ ಆಯೋಜಿಸಿದೆ ಎಂದು ಇದೇ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಶ್ಲಾಘನೆ ವ್ಯಕ್ತಪಡಿಸಿದರು.
ಗಾಳಿಪಟ ಉತ್ಸವದಲ್ಲಿ ಇಂಗ್ಲೆಂಡ್, ಜರ್ಮನಿ, ನೆದರ್ ಲ್ಯಾಂಡ್. ಸ್ಟೋವೆನಿಯಾ, ಇಟೆಲಿ, ಇನ್ನೊನಿಯ, ಸ್ವೀಡನ್, ಇಂಡೋನೆಶಿಯ, ಪೊರ್ಚುಗಲ್ ಮುಂತಾದ ವಿದೇಶಿ ಗಾಳಿಪಟ ತಂಡಗಳು ಮತ್ತು ಓಡಿಸ್ಸಾ, ರಾಜಸ್ತಾನ್, ಮಹಾರಾಷ್ಟ್ರ, ತೆಲಂಗಾಣ, ಕೇರಳ, ಗುಜರಾತ್ ಮುಂತಾದ ರಾಜ್ಯಗಳಿಂದ ಗಾಳಿಪಟ ತಂಡಗಳು ಈ ಉತ್ಸವದಲ್ಲಿ ವಿವಿಧ ಗಾತ್ರ, ಸೂತ್ರ, ವಿನ್ಯಾಸದ ಬಣ್ಣ, ಬಣ್ಣಗಳ ಗಾಳಿಪಟಗಳನ್ನು ಹಾರಿಸಿದವು. ಟೀಮ್ ಮಂಗಳೂರು ತಂಡವು ಕಥಕ್ಕಳಿ, ಯಕ್ಷಗಾನ, ಪುಷ್ಪಕ ವಿಮಾನ, ಗಜರಾಜ ಗರುಡ, ಭಾರತೀಯ ದಂಪತಿ ಮುಂತಾದ ಗಾಳಿಪಟಗಳನ್ನು ರಚಿಸಿದ್ದು ಫ್ರಾನ್ಸ್, ಇಟೆಲಿ, ಇಂಗ್ಲೆಂಡ್, ಕೆನಡಾ, ಕೊರಿಯಾ, ಹಾಂಗ್ ಕಾಂಗ್, ದುಬೈ, ಕತಾರ್ ಮುಂತಾದ ದೇಶಗಳ ಅಂತರ್ ರಾಷ್ಟ್ರೀಯ ಗಾಳಿಪಟ ಉತ್ಸವಗಳಲ್ಲಿ ಭಾಗವಹಿಸಿ ಭಾರತೀಯ ಸಂಸ್ಕೃತಿಯನ್ನು ಪ್ರಚಾರ ಗೊಳಿಸಿವೆ.
‘ಒಂದೇ ಆಕಾಶ, ಒಂದೇ ಭೂಮಿ, ಒಂದೇ ಕುಟುಂಬ’ ಎಂಬ ದ್ವೇಯ ವಾಕ್ಯದಲ್ಲಿ ಈ ಗಾಳಿಪಟ ಉತ್ಸವವು ನಡೆಯುತ್ತಿದ್ದು, ದೇಶ, ದೇಶಗಳ ನಡುವೆ ಸಂಸ್ಕೃತಿಯನ್ನು ಬೆಸೆಯುವ ಉದ್ದೇಶದೊಂದಿಗೆ ಮಹತ್ವದ ಕಾರ್ಯಕ್ರಮವಾಗಿದೆ. . ಬಾನಿನಲ್ಲಿ ಜಿಗಿದಾಡುವ ಸ್ಟಂಟ್ ಗಾಳಿಪಟಗಳು, ಎರೋ ಫಾಯ್ಸ್ ಗಾಳಿಪಟಗಳು (ಗಾಳಿ ತುಂಬಿ ಬಲೂನ್ ರೀತಿಯಲ್ಲಿ ಹಾರಾಡುವ ಬ್ರಹತ್ ಗಾಳಿಪಟಗಳು) ಸೀರೀಸ್ ಕೈಟ್ (ಏಕ ದಾರದಲ್ಲಿ ನೂರಾರು ಗಾಳಿಪಟಗಳು) ರೆಕ್ಕೆ ಬಿಚ್ಚಿ ಹಕ್ಕಿಯಂತೆ ಹಾರಾಡುವ ಗಾಳಿಪಟಗಳು ಈ ಉತ್ಸವದಲ್ಲಿ ಜನರ ಕಣ್ಮನ ಸೆಳೆಯುತ್ತಿವೆ. ಶನಿವಾರ ಮತ್ತು ಭಾನುವಾರ ಸಂಜೆ 3 ಗಂಟೆ ಯಿಂದ ರಾತ್ರಿ 9 ರ ತನಕ ಗಾಳಿಪಟ ಉತ್ಸವ ಹಮ್ಮಿಕೊಳ್ಳಲಾಗಿದೆ.