
ಮಂಗಳೂರು: ನ್ಯಾಯಾಲಯದ ಆದೇಶದಂತೆ ಠಾಣೆಯಲ್ಲಿರುವ ವಾಹನ ಬಿಡಿಸಲು ವ್ಯಕ್ತಿಯೊಬ್ಬರಿಂದ ಲಂಚ ಪಡೆಯುತ್ತಿದ್ದಾಗಲೇ ಲೋಕಾಯುಕ್ತ ಪೊಲೀಸರಿಂದ ಬಂಧಿತರಾಗಿದ್ದ ಉತ್ತರ ಸಂಚಾರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮುಹಮ್ಮದ್ ಶರೀಫ್ ಮತ್ತು ಸಿಬ್ಬಂದಿ ಪ್ರವೀಣ್ ನಾಯ್ಕ್‌ಗೆ ಜಾಮೀನು ಲಭಿಸಿದೆ. ಜ.27 ರಂದು ವಾಹನ ಬಿಡಿಸಲು ಹೋದ ವಾಹನ ಮಾಲಕನಿಗೆ ಉತ್ತರ ಪೋಲಿಸ್ ಠಾಣೆಯ ಇನ್ಸ್ಪೆಕ್ಟರ್ ಮುಹಮ್ಮದ್ ಶರೀಫ್ ಲಂಚದ ಬೇಡಿಕೆ ಇಟ್ಟಿದ್ದರು. ದೂರುದಾರ ಲಂಚವನ್ನು ನೀಡದಿದ್ದ ಹಿನ್ನೆಲೆಯಲ್ಲಿ ವಾಹನ ಬಿಡಿಸಲು ಸತಾಯಿಸಲಾಗಿತ್ತು. ಆದ್ದರಿಂದ ಅವರು ಲೋಕಾಯುಕ್ತ ಠಾಣೆಗೆ ದೂರು ನೀಡಿದ್ದರು. ಬಳಿಕ ಆ ವ್ಯಕ್ತಿಯಿಂದ ಮುಹಮ್ಮದ್ ಶರೀಫ್ ಮತ್ತು ಸಿಬ್ಬಂದಿ ಪ್ರವೀಣ್ ನಾಯ್ಕ 3000ರೂ. ಲಂಚದ ಹಣ ಸ್ವೀಕರಿಸುತ್ತಿದ್ದಾಗಲೇ ಲೋಕಾಯುಕ್ತ ಪೊಲೀಸರು ಇಬ್ಬರನ್ನು ಜ.28ರಂದು ಬಂಧಿಸಿದ್ದರು. ಆರೋಪಿ ಪರ ವಕೀಲರು ಜಾಮೀನು ಅರ್ಜಿಯನ್ನು ಸಲ್ಲಿಸಿದ್ದು ಅರ್ಜಿಯನ್ನು ಪರಿಗಣಿಸಿದ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಸಂಧ್ಯಾ ಅವರು ಇಬ್ಬರಿಗೂ ಆರೋಪಿಗಳನ್ನು ಜಾಮೀನು ಮೇಲೆ ಬಿಡುಗಡೆ ಮಾಡುವಂತೆ ಆದೇಶಿಸಿದ್ದಾರೆ. ಆರೋಪಿಗಳ ಪರವಾಗಿ ಖ್ಯಾತ ವಕೀಲರಾದ ಬಿ. ಅರುಣ್ ಬಂಗೇರ ಮತ್ತು ರಿಹಾನಾ ಪರ್ವಿನ್ ವಾದ ಮಂಡಿಸಿದ್ದಾರೆ.


