
ಮಂಗಳೂರು: ನಂದಿನಿ ಡೈರಿ ಉತ್ಪನ್ನಗಳನ್ನು ಸಾಗಿಸುವ ವಾಹನ ಮತ್ತು ಲಾರಿ ನಡುವೆ ನಡೆದ ಅಪಘಾತದಲ್ಲಿ ನಂದಿನಿ ಡೈರಿ ವಾಹನದ ಕ್ಯಾಬಿನ್ ನಲ್ಲಿ ಕಾಲು ಸಿಕ್ಕಿಕೊಂಡು ಸಂಕಷ್ಟದಲ್ಲಿದ್ದ ಚಾಲಕನ ರಕ್ಷಣೆಗೆ ಸ್ಪೀಕರ್ ಖಾದರ್ ಅವರು ಧಾವಿಸಿ ರಕ್ಷಣಾ ಕಾರ್ಯದಲ್ಲಿ ಕೈಜೋಡಿಸಿ ಮಾನವೀಯತೆ ಮೆರೆದಿದ್ದಾರೆ.



ಮಧ್ಯಾಹ್ನ 2 ಗಂಟೆ ಸುಮಾರಿಗೆ ಅಡ್ಯಾರ್ ಕಣ್ಣೂರಿನಲ್ಲಿ ನಂದಿನಿ ಡೈರಿ ಉತ್ಪನ್ನಗಳನ್ನು ಸಾಗಿಸುತ್ತಿದ್ದ ವಾಹನವು ಡಿವೈಡರ್ ಹಾರಿ ಅತ್ತ ಕಡೆ ಸಂಚರಿಸುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದು ನಿಂತಿದೆ. ಡಿಕ್ಕಿಯ ರಭಸಕ್ಕೆ ವಾಹನದ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿ ಡ್ರೈವರ್ ಕಾಲು ಅದರಡಿ ಸಿಲುಕಿಕೊಂಡಿತ್ತು. ಇದೇ ಮಾರ್ಗವಾಗಿ ಬಂಟ್ವಾಳದತ್ತ ಸಂಚರಿಸುತ್ತಿದ್ದ ಸ್ಪೀಕರ್ ಯು. ಟಿ. ಖಾದರ್ ತಕ್ಷಣ ತಮ್ಮ ಕಾರನ್ನು ನಿಲ್ಲಿಸಿ ಅಪಘಾತದ ಸ್ಥಳಕ್ಕೆ ಧಾವಿಸಿದ್ದಾರೆ.
ಡ್ರೈವರ್ ಕಾಲು ವಾಹನದೊಳಗೆ ಸಿಲುಕಿದ್ದನ್ನು ಗಮನಿಸಿದ ಅವರು, ನಜ್ಜುಗುಜ್ಜಾಗಿದ್ದ ವಾಹನದ ಮುಂಭಾಗವನ್ನು ಸ್ಥಳದಲ್ಲಿ ಜಮಾಯಿಸಿದ್ದ ಸಾರ್ವಜನಿಕರ ಸಹಾಯದಿಂದ ಎಳೆದಿದ್ದಾರೆ. ಈ ವೇಳೆ ವಾಹನದೊಳಗೆ ಸಿಲುಕಿದ್ದ ಕಾಲು ಸುರಕ್ಷಿತವಾಗಿ ಹೊರಗೆ ಬಂದಿದ್ದು, ಡ್ರೈವರ್ ಅಪಾಯದಿಂದ ಪಾರಾಗಿದ್ದಾರೆ. ಸಣ್ಣಪುಟ್ಟ ಗಾಯಗೊಂಡಿದ್ದ ಡ್ರೈವರ್ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.