October 22, 2025
WhatsApp Image 2025-02-13 at 4.33.43 PM
ಮಂಗಳೂರು: ನಕಲಿ ಕರೆನ್ಸಿ ನೋಟುಗಳನ್ನು ಪ್ರಿಂಟ್‌ ಮಾಡಿದ ಪ್ರಕರಣದ ಆರೋಪಿಗೆ ಮಂಗಳೂರಿನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಸುನಿತಾ ಎಸ್‌.ಜಿ. ಅವರು 5 ವರ್ಷಗಳ ಜೈಲು ಶಿಕ್ಷೆ ಹಾಗೂ 20 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಬಂಟ್ವಾಳ ತಾಲೂಕು ಇರಾ ಗ್ರಾಮದ ಅಬ್ಟಾಸ್‌ (57) ಶಿಕ್ಷೆಗೊಳಗಾದ ಆರೋಪಿ. ಈತ ಅಕ್ರಮ ಲಾಭ ಗಳಿಸುವ ಉದ್ದೇಶದಿಂದ ಮಂಗಳೂರು ನಗರದ ಸ್ಟೇಟ್‌ಬ್ಯಾಂಕ್‌ ಬಳಿಯ ಹ್ಯಾಮಿಲ್ಟನ್‌ ಕಟ್ಟಡದಲ್ಲಿ ಮಕ್ಕಳ ಪ್ರಾಜೆಕ್ಟ್ ವರ್ಕ್‌ಗೆಂದು ಸುಳ್ಳು ಹೇಳಿ 100 ರೂ. ಮುಖಬೆಲೆಯ ಕರೆನ್ಸಿ ನೋಟುಗಳನ್ನು ಕಲರ್‌ ಪ್ರಿಂಟ್‌ ಮಾಡಿಸಿದ್ದ. ಈ ನೋಟುಗಳನ್ನು ಚಲಾವಣೆ ಮಾಡುವ ಉದ್ದೇಶದಿಂದ ತನ್ನ ಸ್ವಾಧೀನದಲ್ಲಿರಿಸಿ 2020ರ ಅ. 31ರಂದು ಮೋರ್ಗನ್ಸ್‌ ಗೇಟ್‌ ಜಂಕ್ಷನ್‌ ಬಳಿ ಇರುವ ಅಂಗಡಿಗಳಲ್ಲಿ ವಸ್ತುಗಳನ್ನು ಖರೀದಿಸುವ ನೆಪದಲ್ಲಿ ನಕಲಿ ನೋಟುಗಳನ್ನು ಚಲಾವಣೆಗೆ ಪ್ರಯತ್ನಿಸುತ್ತಿದ್ದಾಗ ಸಿಸಿಬಿ ಘಟಕದ ಪೊಲೀಸ್‌ ಉಪನಿರೀಕ್ಷಕ ಪ್ರದೀಪ್‌ ಟಿ.ಆರ್‌. ಹಾಗೂ ಸಿಬಂದಿ ದಾಳಿ ನಡೆಸಿ ಆರೋಪಿತನ ವಶದಿಂದ 11 ನಕಲಿ ನೋಟುಗಳನ್ನು ಹಾಗೂ 2 ಅಸಲಿ ನೋಟುಗಳನ್ನು ಸ್ವಾಧೀನಪಡಿಸಿಕೊಂಡಿದ್ದರು. ಈ ಬಗ್ಗೆ ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆಯಲ್ಲಿ  ಪ್ರಕರಣ ದಾಖಲಾಗಿತ್ತು. ಮಂಗಳೂರು ದಕ್ಷಿಣ ಪೊಲೀಸ್‌ ಉಪನಿರೀಕ್ಷಕ ಸುರೇಶ್‌ ಕುಮಾರ್‌ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದಲ್ಲಿ ಅಭಿಯೋಜನೆ ಪರ ಒಟ್ಟು 13 ಸಾಕ್ಷಿದಾರರನ್ನು ವಿಚಾರಿಸಿ 14 ದಾಖಲೆಗಳನ್ನು ಗುರುತಿಸಲಾಗಿತ್ತು.
ನ್ಯಾಯಾಧೀಶರು ಪ್ರಕರಣದ ಸಾಕ್ಷ್ಯ, ದಾಖಲೆಗಳು ಹಾಗೂ ಪೂರಕ ಸಾಕ್ಷ್ಯ ಮತ್ತು ವಾದ ವಿವಾದ ಆಲಿಸಿ ಆರೋಪಿಯ ವಿರುದ್ಧ ಅಪರಾಧ ಸಾಬೀತಾಗಿದೆ ಎಂದ ತೀರ್ಮಾನಿಸಿ ಫೆ. 12ರಂದು ಆರೋಪಿ ಅಬ್ಟಾಸ್‌ಗೆ ಭಾರತೀಯ ದಂಡ ಸಂಹಿತೆಯ ಕಲಂ 489(ಸಿ) ಅಡಿಯಲ್ಲಿ 5 ವರ್ಷಗಳ ಕಾಲ ಜೈಲು ಮತ್ತು 20 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಈ ಪ್ರಕರಣದಲ್ಲಿ ಪ್ರಾಥಮಿಕ ಹಂತದಲ್ಲಿ ಸರಕಾರಿ ಅಭಿಯೋಜಕ ಜುಡಿತ್‌ ಓಲ್ಗಾ ಮಾರ್ಗರೇಟ್‌ ಕ್ರಾಸ್ತಾ ಮತ್ತು ಬಿ. ಪ್ರಕಾಶ್ಚಂದ್ರ ಶೆಟ್ಟಿ ಸರಕಾರದ ಪರ ಪ್ರಕರಣ ಮುನ್ನಡೆಸಿದ್ದು, ಅನಂತರದಲ್ಲಿ ಹರೀಶ್ಚಂದ್ರ ಉದಿಯಾವರ್‌ ವಿಚಾರಣೆ ನಡೆಸಿ ವಾದ ಮಂಡಿಸಿದ್ದರು

About The Author

Leave a Reply