ಮಂಗಳೂರು: ನಾನು ಕುಂಭ ಮೇಳಕ್ಕೆ ಹೋಗಲ್ಲ – ನಟ ಪ್ರಕಾಶ್ ರೈ

ಮಂಗಳೂರು: ನಾನು ಧರ್ಮವಿರೋಧಿಯಲ್ಲ. ಆದ್ರೆ ಕುಂಭ ಮೇಳಕ್ಕೆ ಹೋಗಲ್ಲ. ಎಲ್ಲವೂ ಅವರವರ ನಂಬಿಕೆಗೆ ಬಿಟ್ಟಿದ್ದು ಎಂದು ನಟ ಪ್ರಕಾಶ್ ರೈ ಮಂಗಳೂರಿನಲ್ಲಿ ಹೇಳಿದ್ದಾರೆ.

ಕುಂಭಮೇಳಕ್ಕೆ ಹೋಗುವ ಎಂದು ನನ್ನ ಕೆಲ ಸ್ನೇಹಿತರು ಪರ್ಮಿಷನ್‌ ಗೆ ಕಾಲ್ ಮಾಡಿದ್ದರು. ನನಗೆ‌ ಅದರಲ್ಲಿ ನಂಬಿಕೆ‌ಯಿಲ್ಲ. ನಾನು ಸೌಹಾರ್ದಕ್ಕೆ ಬೆಲೆ‌ ಕೊಡುವವನು. ಹಾಗಾಗಿ ಹೋಗಿಲ್ಲ ಎಂದರು. ಧಾರ್ಮಿಕ ವಿಚಾರದಲ್ಲಿ ರಾಜಕಾರಣ ಮಾಡುವವರು ನಿಜವಾದ ಹಿಂದೂಗಳಲ್ಲ. ಧಾರ್ಮಿಕ ಆಚರಣೆ, ಪೂಜೆಯಲ್ಲೂ ರಾಜಕಾರಣ ಎಳೆ ತರಲಾಗುತ್ತಿದೆ. ಒಂದು ಸರಕಾರವನ್ನು ಒಬ್ಬ ವ್ಯಕ್ತಿಯನ್ನು ಪ್ರಶ್ನಿಸಿದ್ದೇನೆ ಎಂದ ಮಾತ್ರಕ್ಕೆ ವಾಟ್ಸ್‌ಆ್ಯಪ್ ಯುನಿವರ್ಸಿಟಿಗಳಲ್ಲಿ ತಪ್ಪು ಮಾಹಿತಿ ಹರಡಲಾಗುತ್ತದೆ.

ಅಂತಹದನ್ನೆಲ್ಲಾ ಪ್ರಶಾಂತ ಸಂಬರ್ಗಿಯವರು ಮಾಡುತ್ತಿದ್ದಾರೆ. ಅವರ ಮೇಲೆ ಕೇಸ್ ಫೈಲ್ ಮಾಡಿದ್ದೇವೆ. ಎಐ ಮೂಲಕ ತಪ್ಪನ್ನು ಹರಡಲಾಗುತ್ತಿದೆ. ಅದು ಅಕ್ಷಮ್ಯ ಅಪರಾಧ. ಅದು ಅವರ ಮಾನಸಿಕತೆಯನ್ನು ಬಿಂಬಿಸುತ್ತದೆ ಎಂದರು. ರಾಜ್ಯದಲ್ಲಿ ದಲಿತ ಸಿಎಂ ಚರ್ಚೆ ವಿಚಾರವಾಗಿ ಮಾತನಾಡಿದ ಪ್ರಕಾಶ್ ರೈ, ಅಂಬೇಡ್ಕರ್ ಅವರನ್ನು ಹೇಗೆ ಕೊಲ್ಲಬೇಕೆಂದು ಬಿಜೆಪಿ ಯೋಚನೆ ಮಾಡುತ್ತದೆ. ಅತ್ತ ಕಾಂಗ್ರೆಸ್ ಅಂಬೇಡ್ಕರ್ ಅವರನ್ನು ಹೇಗೆ ಉಪಯೋಗಿಸಬೇಕೆಂದು ಯೋಚನೆ ಮಾಡುತ್ತದೆ. ಇವರಿಬ್ಬರ ಮಾತಿನ ನಡುವಿನ ಮೌನವನ್ನು ನಾವು ಪ್ರಜೆಗಳಾಗಿ ಅರ್ಥ ಮಾಡ್ಕೋಬೇಕು. ಜನರಿಗೆ ಈಗ ಅರ್ಥವಾಗುತ್ತಿದೆ. ಆಶ್ವಾಸನೆಗಳು ಎಷ್ಟು ಸುಳ್ಳು ಮಾತುಗಳು ಎಷ್ಟು ಸುಳ್ಳು ಅನ್ನೋದು ಜನರಿಗೆ ಅರ್ಥವಾಗುತ್ತದೆ. ಯಾರದೋ ಮಾತು ಕೇಳಿ ವೋಟ್ ಮಾಡುವುದರಿಂದ ಏನಾಗುತ್ತಿದೆ ಅನ್ನೋದು ಗೊತ್ತಾಗುತ್ತಿದೆ ಎಂದು ಹೇಳಿದರು.

Leave a Reply