
ಅಬುಧಾಬಿ: ಉತ್ತರಪ್ರದೇಶದ ಮಹಿಳೆಯೊಬ್ಬರು ಅಬುಧಾಬಿಯಲ್ಲಿ ಮರಣದಂಡನೆಗೆ ಒಳಗಾಗಿದ್ದಾರೆ. ಮಗುವೊಂದನ್ನು ಹತ್ಯೆಗೈದ ಆರೋಪದ ಮೇಲೆ ಅವರನ್ನು ಬಂಧಿಸಿದ್ದು, ಅಲ್ ವತ್ಬಾ ಜೈಲಿನಲ್ಲಿ ಇರಿಸಲಾಗಿದೆ.



ಮಹಿಳೆಯು ಮುಂದಿನ 24 ಗಂಟೆಗಳಲ್ಲಿ ಗಲ್ಲುಶಿಕ್ಷೆಗೆ ಒಳಗಾಗುವ ಸಾಧ್ಯತೆಯಿದೆ. ಈ ಮಧ್ಯೆ ಜೈಲಿನ ಅಧಿಕಾರಿಗಳು ಕೊನೆಯ ಬಾರಿಗೆ ಅವರ ಕುಟುಂಬದೊಂದಿಗೆ ಮಾತನಾಡಲು ಅವಕಾಶಕೊಟ್ಟಿದ್ದು, ಮಹಿಳೆ ತನ್ನ ತಂದೆಯೊಂದಿಗೆ ಭಾವುಕರಾಗಿ ಮಾತನಾಡಿದ್ದಾರೆ. ಮಹಿಳೆ ಅಬುಧಾಬಿಯಲ್ಲಿ ದಂಪತಿಯ ಮಗುವನ್ನು ಆರೈಕೆ ಮಾಡುವ ಕೆಲಸಕ್ಕೆ ಸೇರಿದ್ದರು. ಮಗು ಅನಿರೀಕ್ಷಿತವಾಗಿ ಸಾವನ್ನಪ್ಪಿದಾಗ ಶಹಜಾದಿ ವಿರುದ್ದ ಪ್ರಕರಣ ದಾಖಲಾಗಿತ್ತು.
ಶಹಜಾದಿ ಎಂಬ ಹೆಸರಿನ ಮಹಿಳೆಯು 2021ರಲ್ಲಿ ಅಬುಧಾಬಿಗೆ ಹೋಗಿದ್ದಾರೆ. ಉತ್ತರಪ್ರದೇಶದ ಮತೌಂಧ್ ಪ್ರದೇಶದ ಗೋಯ್ರಾ ಮುಗ್ಲಿ ಗ್ರಾಮದ ನಿವಾಸಿಯಾಗಿದ್ದ ಆಕೆ, ಆಗ್ರಾದ ಉಜೈರ್ ಎಂಬ ವ್ಯಕ್ತಿಯ ಜೊತೆಗೆ ಐಷಾರಾಮಿ ಜೀವನದ ಆಸೆಯಿಂದಾಗಿ ಹೋಗಿದ್ದಾಳೆ ಎನ್ನಲಾಗಿದೆ. ಉಜೈರ್ ಶಹಜಾದಿಯನ್ನು ಆಗ್ರಾ ಮೂಲದ ದಂಪತಿಗೆ ಮಾರಾಟ ಮಾಡಿದ್ದಾನೆ. ದಂಪತಿ ಆಕೆಯನ್ನು ಅಬುಧಾಬಿಗೆ ಕರೆದೊಯ್ದಿದ್ದಾರೆ.
ದಂಪತಿ ತಮ್ಮ ಮಗುವನ್ನು ಆರೈಕೆ ಮಾಡುವ ಕೆಲಸಕ್ಕೆ ಮಹಿಳೆಯನ್ನು ಇರಿಸಿಕೊಂಡಿದ್ದು, ಒಮ್ಮೆ ದಂಪತಿಯ ಮಗು ಅನಿರೀಕ್ಷಿತವಾಗಿ ಮೃತಪಟ್ಟಿದೆ. ಮಗುವನ್ನು ಹತೈಗೈದ ಆರೋಪದ ಮೇಲೆ ಮಹಿಳೆಯನ್ನು ಬಂಧಿಸಿ ಇದೀಗ ಆಕೆಗೆ ಮರಣದಂಡನೆ ವಿಧಿಸಲಾಗಿದೆ. ಬಂಡಾ ಪ್ರದೇಶದ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶದ ಮೇರೆಗೆ, ಅಧಿಕಾರಿಗಳು ಈಗ ದುಬೈನಲ್ಲಿ ವಾಸಿಸುತ್ತಿರುವ ದಂಪತಿ ಮತ್ತು ಉಜೈರ್ ವಿರುದ್ಧ ಮಾನವ ಕಳ್ಳಸಾಗಣೆ ಪ್ರಕರಣವನ್ನು ದಾಖಲಿಸಿದ್ದಾರೆ.
ಶಹಜಾದಿ ಮತ್ತು ಆಕೆಯ ತಂದೆ ಮಗುವಿನ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ವಾದಿಸಿದ್ದಾರೆ. ದಂಪತಿ ಶಹಜಾದಿ ವಿರುದ್ಧ ಆರೋಪ ಹೊರಿಸಿದ್ದಾರೆ. ಮಹಿಳೆ ಸಾಕಷ್ಟು ಕಾನೂನು ಹೋರಾಟ ನಡೆಸಿ ವಿಫಲಳಾಗಿದ್ದಾಳೆ. ಆಕೆಯ ವಿರುದ್ಧ ಪ್ರಕರಣ ದಾಖಲಾಗಿ ಅಂತಿಮವಾಗಿ ಮರಣದಂಡನೆ ವಿಧಿಸಲಾಗಿದೆ. ಶಹಜಾದಿಯ ಪೋಷಕರು ತಮ್ಮ ಮಗಳು ನಿರ್ದೋಷಿ ಎಂದು ಹೇಳಿದ್ದು, ಮರಣದಂಡನೆ ತಪ್ಪಿಸುವಂತೆ ಸರ್ಕಾರ ಮತ್ತು ಅಬುಧಾಬಿ ಅಧ್ಯಕ್ಷರಲ್ಲಿ ಮನವಿ ಮಾಡಿದ್ದಾರೆ.