
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು 2025-26ನೇ ಸಾಲಿನ ಬಜೆಟ್ ಮಂಡನೆಯ ಸಿದ್ಧತೆಗಳಲ್ಲಿ ತೊಡಗಿದ್ದು ಈಗಾಗಲೇ ಇಲಾಖಾವಾರು ಸಭೆಗಳನ್ನು ನಡೆಸಿದ್ದಾರೆ. ಮುಂದುವರಿದ ಭಾಗವಾಗಿ ಮಂಗಳವಾರ ವಿವಿಧ ಸಮುದಾಯಗಳ ಮುಖಂಡರು ಹಾಗೂ ಸಂಘ-ಸಂಸ್ಥೆಗಳ ಪ್ರತಿನಿಧಿಗಳಳೊಂದಿಗೆ ಬಜೆಟ್ ಸಭೆಗಳು ನಿಗದಿಯಾಗಿದೆ.



ವಿಪರ್ಯಾಸವೆಂದರೆ ಅಲ್ಪಸಂಖ್ಯಾತ ಸಮುದಾಯ ಸಾಮಾಜಿಕ ಮುಖಂಡರು, ಸಂಘ-ಸಂಸ್ಥೆಗಳ ಮುಖಂಡರನ್ನು ಈ ಬಜೆಟ್ ಪೂರ್ವಭಾವಿ ಸಭೆಯಿಂದ ಹೊರಗಿಡಲಾಗಿದೆ. ಸರ್ಕಾರದ ಈ ನಡೆಗೆ ಅಲ್ಪಸಂಖ್ಯಾತ ಸಮುದಾಯದ ಮುಖಂಡರು ಹಾಗೂ ಸಂಘ-ಸಂಸ್ಥೆಗಳಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಮಧ್ಯಾಹ್ನ 12 ಗಂಟೆಗೆ ದಲಿತ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಸಮುದಾಯದ ಮುಖಂಡರನ್ನು ಬಜೆಟ್ ಪೂರ್ವಭಾವಿ ಸಭೆಗೆ ಆಹ್ವಾನಿಸಲಾಗಿದೆ. ಅದೇ ರೀತಿ ಸಂಜೆ 4 ಗಂಟೆಗೆ ಹಿಂದುಳಿದ ವರ್ಗಗಳ ಮುಖಂಡರು ಹಾಗೂ ಸಂಘ- ಸಂಸ್ಥೆಗಳ ಸಭೆ ಕರೆಯಲಾಗಿದೆ. ಸಂಜೆ 6 ಗಂಟೆಗೆ ಅಲ್ಪಸಖ್ಯಾತರ ಕಲ್ಯಾಣ ಇಲಾಖೆಗೆ ಸಂಬಂಧಿಸಿದ ಸಭೆ ಇದ್ದು, ಅದರಲ್ಲಿ ಅಲ್ಪಸಂಖ್ಯಾತ ಸಮುದಾಯದ ಸಚಿವರು ಮತ್ತು ಶಾಸಕರನ್ನು ಮಾತ್ರ ಆಹ್ವಾನಿಸಲಾಗಿದೆ.
ಇದು ಅಲ್ಪಸಂಖ್ಯಾತ ಸಮುದಾಯದ ಮುಖಂಡರ ಹಾಗೂ ಸಂಘ-ಸಂಸ್ಥೆಗಳ ಸ್ಪಷ್ಟ ಕಡೆಗಣನೆಯಾಗಿದೆ. ಸಮುದಾಯದ ಮುಖಂಡರು ಹಾಗೂ ಸಂಘಸಂಸ್ಥೆಗಳನ್ನು ಹೊರಗಿಟ್ಟು ನಡೆಸುವ ಈ ಸಭೆ ಕೇವಲ ಕಾಟಾಚಾರದ ಸಭೆ ಆಗಲಿದೆ. ಸಮಯದಾಯದ ಬೇಕು-ಬೇಡಗಳ ಕುರಿತು ಸಮುದಾಯದ ಮುಖಂಡರು ಹಾಗೂ ಸಂಘ-ಸಂಸ್ಥೆಗಳ ಅಭಿಪ್ರಾಯ, ಅಹವಾಲುಗಳನ್ನು ಕೇಳಬೇಕಾಗಿರುವುದು ಮುಖ್ಯಮಂತ್ರಿಯವರ ಆದ್ಯ ಕರ್ತವ್ಯ, ಉಳಿದೆಲ್ಲ ಸಮುದಾಯಗಳ ಮುಖಂಡರು, ಸಂಘ-ಸಂಸ್ಥೆಗಳನ್ನು ಆಹ್ವಾನಿಸಿ, ಅಲ್ಪಸಂಖ್ಯಾತ ಸಮುದಾಯದ ಮುಖಂಡರು, ಸಂಘ-ಸಂಸ್ಥೆಗಳನ್ನು ಕೈಬಿಟ್ಟಿರುವುದು ಸಮಾಜವಾದ, ಸಮಾನತೆಯ ಸಿದ್ದಾಂತದ ಪ್ರಬಲ ಪ್ರತಿಪಾದಕರಾಗಿರುವ ಸಿದ್ದರಾಮಯ್ಯನವರಿಗೆ ಶೋಭೆ ತರುವುದಿಲ್ಲ. ಕಾಲ ಮಿಂಚಿಲ್ಲ ಸಭೆ ಸಂಜೆ ಇರುವುದರಿಂದ ಸಮುದಾಯದ ಮುಖಂಡರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳನ್ನು ಸಭೆಗೆ ಆಹ್ವಾನಿಸಬೇಕು.
ಇಲ್ಲದಿದ್ದರೆ ಬಜೆಟ್ ಪೂರ್ವಭಾವಿ ಸಭೆಗಳಿಗೆ ವಿವಿಧ ಸಮುದಾಯದ ಮುಖಂಡರು ಹಾಗೂ ಸಂಘ-ಸಂಸ್ಥೆಗಳಿಗೆ ಆಹ್ವಾನಿಸುವ ಅರ್ಹತೆ ಅಥವಾ ಮಾನದಂಡಗಳೇನು ಎಂಬುದನ್ನು ಸಿಎಂ ಕಚೇರಿ ಸ್ಪಷ್ಟಪಡಿಸಬೇಕು. ಸಮುದಾಯದ ಮುಖಂಡರು ಹಾಗೂ ಸಂಘ-ಸಂಸ್ಥೆಗಳನ್ನು ಹೊರಗಿಟ್ಟು ನಡೆಸಲಾಗುತ್ತಿರುವ ಈ ಸಭೆಯನ್ನು ಸಮುದಾಯದ ಸಚಿವರು, ಶಾಸಕರು ಬಹಿಷ್ಕರಿಸಬೇಕು.
ಪ್ರತಿನಿಧಿಗಳು
ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ ಸಂಘ