
ಪುತ್ತೂರು: ಎರಡು ಕಾರುಗಳು ಮುಖಾಮುಖಿಯಾಗಿ ಡಿಕ್ಕಿ ಹೊಡೆದ ಘಟನೆ ಪುತ್ತೂರಿನ ಪೋಳ್ಯ ಸಮೀಪದ ಪುಳಿತ್ತಡಿಯಲ್ಲಿ ನಡೆದಿದ್ದು, ಕಾರಿನಲ್ಲಿದ್ದ ಮೂವರಿಗೆ ಗಾಯಗಳಾಗಿವೆ.



ಬಿ.ಸಿ.ರೋಡ್ ಸಾಗರ್ ಆಡಿಟೋರಿಯಂ ನಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭಕ್ಕೆ ತೆರಳುತ್ತಿದ್ದ ರೆಮ್ಮಾಯಿ ಸಮೀಪದ ನಿವಾಸಿಗಳಿದ್ದ ಕಾರು ಹಾಗೂ ಮಂಗಳೂರಿನಿಂದ ಪುತ್ತೂರು ಕಡೆಗೆ ತೆರಳುತ್ತಿದ್ದ ಕಾರಿನ ಮಧ್ಯೆ ಈ ಅಪಘಾತ ಸಂಭವಿಸಿದೆ.
ಮದುವೆಗೆ ತೆರಳುತ್ತಿದ್ದ ಕಾರಿನ ಮುಂಭಾಗದಲ್ಲಿ ಹೂವಿನ ಬೊಕ್ಕೆಯಿಂದ ಅಲಂಕಾರ ಮಾಡಿದ್ದು, ಗಾಳಿಗೆ ಹೂವಿನ ಬೊಕ್ಕೆ ಚಾಲಕನ ಸೈಡಿನ ಗಾಜಿಗೆ ಬಡಿದ ಹಿನ್ನೆಲೆಯಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ವಿರುದ್ಧ ದಿಕ್ಕಿಗೆ ಸಂಚರಿಸಿ ಮುಂಭಾಗದಲ್ಲಿ ಬರುತ್ತಿದ್ದ ಇನ್ನೊಂದು ಕಾರಿಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಕಾರಿನ ಮುಂಭಾಗ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಮೂವರಿಗೆ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಿಂದಾಗಿ ಅಲ್ಪ ಹೊತ್ತು ರಸ್ತೆ ಸಂಚಾರ ವ್ಯತ್ಯಯವಾಗಿದ್ದು ಪುತ್ತೂರು ಸಂಚಾರಿ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ವಾಹನಗಳನ್ನು ತೆರವು ಮಾಡಿದ್ದಾರೆ.