October 12, 2025
VITLA

ವಿಟ್ಲ : ವಿಟ್ಲದ ಬೋಳಂತೂರಿನ ಸಿಂಗಾರಿ ಬಿಡಿ ಮಾಲೀಕರ ಮನೆ ಮೇಲೆ ನಕಲಿ ಇಡಿ ಅಧಿಕಾರಿಗಳ ಹೆಸರಿನಲ್ಲಿ ದಾಳಿ ನಡೆಸಿ ಲಕ್ಷಾಂತರ ಹಣ ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೋರ್ವ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತ ಆರೋಪಿಯನ್ನು ಕೇರಳದ ಕಣ್ಣೂರು ನಿವಾಸಿ ಅಬ್ದುಲ್‌ ನಾಸೀರ್‌(52) ಎಂದು ಗುರುತಿಸಲಾಗಿದೆ. ಈ ಪ್ರಕರಣದಲ್ಲಿ ಇದೀಗ ಬಂಧಿತರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.

ದರೋಡೆ ಪ್ರಕರಣದಲ್ಲಿ ಸದ್ಯಕ್ಕೆ ಬಂಧಿತನಾಗಿರುವ ಕಣ್ಣೂರು ಮೂಲದ ಅಬ್ದುಲ್‌ ನಾಸೀರ್‌, ಸ್ಥಳೀಯ ಆರೋಪಿ ಸಿರಾಜುದ್ದೀನ್‌ ಹಾಗೂ ಪ್ರಧಾನ ಸೂತ್ರಧಾರಿ ಎಎಸ್‌ಐ ಮಧ್ಯೆ ಸಂಪರ್ಕ ಸೇತುವಾಗಿದ್ದ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಸಿಂಗಾರಿ ಬೀಡಿ ಸಂಸ್ಥೆಯಲ್ಲಿ ಬೀಡಿ ಪ್ಯಾಕಿಂಗ್‌ ಕಾರ್ಯ ನಿರ್ವಹಿಸುತ್ತಿದ್ದ ಸಿರಾಜುದ್ದೀನ್‌ ತನ್ನ ಮಾಲಕನ ಮೇಲಿನ ಮನಸ್ತಾಪದಿಂದ ಕೆಲಸ ತ್ಯಜಿಸಿದ್ದ. ಜತೆಗೆ ಮಾಲಕನ ವಿರುದ್ಧ ಸೇಡು ತೀರಿಸಲು ಇ.ಡಿ.ಗೆ ದೂರು ನೀಡುವುದಾಗಿ ಹೇಳುತ್ತಿದ್ದ. ಸಿರಾಜುದ್ದೀನ್‌ನ ಸೇಡಿನ ವಿಚಾರವನ್ನು ಎಎಸ್‌ಐಗೆ ತಿಳಿಸಿ ಇಂತಹ ನಕಲಿ ಇಡಿ ದಾಳಿ ಸಂಘಟಿಸಲು ನಾಸೀರ್‌ ಪ್ರಮುಖ ಪಾತ್ರ ವಹಿಸಿದ್ದ ಎನ್ನಲಾಗಿದೆ.
ಈ ಪ್ರಕರಣದಲ್ಲಿ ಈ ಹಿಂದೆ ಪೊಲೀಸರು ತ್ರಿಶೂರು ಕೊಡಂಗಲ್ಲೂರು ಪೊಲೀಸ್‌ ಠಾಣೆಯಲ್ಲಿ ಎಎಸ್‌ಐ ಆಗಿದ್ದ ಶಫೀರ್‌ ಬಾಬು (48), ಬಿ.ಸಿ.ರೋಡು ಪರ್ಲಿಯಾ ನಿವಾಸಿ ಮಹಮ್ಮದ್‌ ಇಕ್ಬಾಲ್‌(38), ಕೊಳ್ನಾಡು ಗ್ರಾಮ ನಿವಾಸಿ ಸಿರಾಜುದ್ದೀನ್‌ ನಾರ್ಶ(37), ಮಂಗಳೂರು ಪಡೀಲು ನಿವಾಸಿ ಮಹಮ್ಮದ್‌ ಅನ್ಸಾರ್‌ (27), ಕೇರಳದ ಕೊಟ್ಟಾಯಂ ನಿವಾಸಿಗಳಾದ ಅನಿಲ್‌ ಫೆರ್ನಾಂಡಿಸ್‌(49), ಸಚಿನ್‌ ಟಿ.ಎಸ್‌.(29) ಹಾಗೂ ಶಬಿನ್‌ ಎಸ್‌.(27) ಅವರನ್ನು ಬಂಧಿಸಿದ್ದಾರೆ.

ಸದ್ಯ ಈ ಪ್ರಕರಣದಲ್ಲಿ ದರೋಡೆ ಆಗಿರುವ ಹಣದ ಬಗ್ಗೆ ಬಾರೀ ಗುಸುಗುಸು ಆರಂಭವಾಗಿದ್ದು, ಕೋಟಿಗಟ್ಟಲೆ ಹಣ ದರೋಡೆ ಆಗಿದೆ ಎಂಬ ಮಾತು ಎಲ್ಲೆಡೆ ಕೇಳಿ ಬರಲಾರಂಭಿಸಿದೆ.

About The Author

Leave a Reply