
ಉಪ್ಪಿನಂಗಡಿ: ಹೃದಯಾಘಾತದಿಂದ ನವವಿವಾಹಿತ ಯುವಕನೋರ್ವ ಮೃತಪಟ್ಟ ದಾರುಣ ಘಟನೆ 34 ನೆಕ್ಕಿಲಾಡಿಯ ಕೊಳಕ್ಕೆ ಎಂಬಲ್ಲಿ ನಡೆದಿದೆ.



ಕೊಳಕ್ಕೆ ನಿವಾಸಿ ದಿ. ಕೃಷ್ಣಪ್ಪ ನಾಯ್ಕ ಎಂಬವರ ಪುತ್ರ ಕೇಶವ ಕೆ. (28 ವ.) ಮೃತಪಟ್ಟವರು.
ಇಲ್ಲಿನ ವೈನ್ ಶಾಪ್ ವೊಂದರಲ್ಲಿ ಉದ್ಯೋಗಿಯಾಗಿದ್ದ ಇವರಿಗೆ ಎರಡು ದಿನಗಳಿಂದ ಜ್ವರವಿದ್ದು, ಉಪ್ಪಿನಂಗಡಿಯ ಖಾಸಗಿ ಆಸ್ಪತ್ರೆಯೊಂದರಿಂದ ಔಷಧಿ ಪಡೆದುಕೊಂಡಿದ್ದರು.
ಶನಿವಾರ ನಸುಕಿನ ಜಾವ ಸುಮಾರು 3 ಗಂಟೆಗೆ ಪತ್ನಿ ಎಚ್ಚರಗೊಂಡು ಇವರನ್ನು ನೋಡಿದಾಗ ಮಲಗಿದ್ದ ಹಾಸಿಗೆಯಲ್ಲಿಯೇ ಎದ್ದು ಕುಳಿತು ಗೋಡೆಗೊರಗಿ ಎದೆಯ ಬಳಿ ತನ್ನ ಕೈಯನ್ನಿಟ್ಟುಕೊಂಡ ಸ್ಥಿತಿಯಲ್ಲಿ ಕಂಡು ಬಂದಿದ್ದರು. ಪತ್ನಿ ಮಾತನಾಡಲೆತ್ನಿಸಿದಾಗ ಇವರು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ಕೂಡಲೇ ನೆರೆಹೊರೆಯವರ ಸಹಕಾರದೊಂದಿಗೆ ಇವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲೇ ಅವರು ಮೃತರಾಗಿದ್ದಾರೆ.
ಕೇಶವರವರು ಪ್ರಾಮಾಣಿಕ ದುಡಿಮೆಯಿಂದ ತನ್ನ ಬದುಕನ್ನು ಕಟ್ಟಿಕೊಂಡಿದ್ದರು.’ ಸುಮಾರು ಒಂದೂವರೆ ವರ್ಷದ ಹಿಂದೆಯಷ್ಟೇ ಇವರಿಗೆ ಮದುವೆಯಾಗಿದ್ದು, ಮೂರು ತಿಂಗಳ ಹಸುಗೂಸು ಇದೆ. ಎಲ್ಲರೊಂದಿಗೂ ನಗು ಮುಖದಿಂದಲೇ ಮಾತನಾಡುತ್ತಿದ್ದ ಇವರು ಸೌಮ್ಯ ಸ್ವಭಾವದ ವ್ಯಕ್ತಿಯಾಗಿದ್ದರು. ಮೃತರು ಪತ್ನಿ ಸಂಧ್ಯಾ ಹಾಗೂ ಮೂರು ತಿಂಗಳ ಹಸುಗೂಸನ್ನು ಅಗಲಿದ್ದಾರೆ.