August 30, 2025
WhatsApp Image 2025-05-14 at 6.33.14 PM

ಮಂಗಳೂರು: “ಮೇ 16ರಂದು ಜಿಲ್ಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿ ನೀಡಲಿದ್ದು ಈ ವೇಳೆ ದೇಶದಲ್ಲೇ ಅತ್ಯಂತ ದೊಡ್ಡದಾದ ಹಾಗೂ ವಿವಿಧ ಇಲಾಖೆಗಳ ಕಚೇರಿಗಳನ್ನು ಒಂದೇ ಸೂರಿನಡಿ ಒಳಗೊಂಡಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಲೋಕಾರ್ಪಣೆಗೊಳ್ಳಲಿದೆ” ಎಂದು ವಿಧಾನ ಪರಿಷತ್ ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಮಂಜುನಾಥ ಭಂಡಾರಿ ಅವರು ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು. ಸಿದ್ದರಾಮಯ್ಯ ಅವರು ಪಾಲ್ಗೊಳ್ಳುವ ಕಾರ್ಯಕ್ರಮವನ್ನು ಅವಿಸ್ಮರಣೀಯಗೊಳಿಸಬೇಕು ಎಂಬ ನಿಟ್ಟಿನಲ್ಲಿ ಅಂದು 8000 ಮಂದಿ ಫಲಾನುಭವಿಗಳಿಗೆ ಮನೆಯ ಆರ್ ಟಿಸಿ ವಿತರಣೆ, ಅಲ್ಪಸಂಖ್ಯಾತ ನಿಗಮ, ಅಂಬೇಡ್ಕರ್ ನಿಗಮ ಸಹಿತ ಮೂರು ನಿಗಮಗಳ ಫಲಾನುಭವಿಗಳಿಗೆ ವಿವಿಧ ಯೋಜನೆಗಳ ಸವಲತ್ತುಗಳ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ“ ಎಂದರು.

”ಅದೇ ದಿನ 30 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಕಬಡ್ಡಿ ಮತ್ತು ಬ್ಯಾಡ್ಮಿಂಟನ್ ಕ್ರೀಡಾಂಗಣ ಉದ್ಘಾಟನೆಯನ್ನು ಮುಖ್ಯಮಂತ್ರಿಗಳು ನೆರವೇರಿಸಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಗೆ 8 ವರ್ಷಗಳ ಹಿಂದೆಯೇ ಶಿಲಾನ್ಯಾಸ ನೆರವೇರಿತ್ತಾದರೂ ಅದು ಸಂಪೂರ್ಣಗೊಂಡಿರಲಿಲ್ಲ. ನಾನು, ಜಿಲ್ಲಾ ಉಸ್ತುವಾರಿ ಸಚಿವರು, ವಿಧಾನಸಭಾ ಅಧ್ಯಕ್ಷರು ಸೇರಿ ಎರಡು ಮೂರು ಬಾರಿ ಜಿಲ್ಲಾಧಿಕಾರಿ ಕಚೇರಿಯನ್ನು ಪೂರ್ತಿಗೊಳಿಸಲು ಸಚಿವ ಕೃಷ್ಣ ಭೈರೇಗೌಡ ಅವರಿಗೆ ಮನವಿಯನ್ನು ಮಾಡಿದ್ದೆವು. ನಂತರ ಅವರನ್ನು ಕರೆದುಕೊಂಡು ಬಂದು ತೋರಿಸಿದಾಗ ಹೆಚ್ಚುವರಿ 30 ಕೋಟಿ ರೂ. ಅಂದಾಜು ಅನುದಾನ ಬೇಕಾಗಬಹುದು ಎಂದು ಮನವಿ ಮಾಡಿದಂತೆ ಅವರು ವಿಶೇಷ ಮುತುವರ್ಜಿ ವಹಿಸಿ 20 ಕೋಟಿ ರೂ. ಅನ್ನು ಬಿಡುಗಡೆ ಮಾಡಿ ಕಟ್ಟಡ ಪೂರ್ಣಗೊಳ್ಳಲು ಸಹಕರಿಸಿದ್ದಾರೆ. ಸುಮಾರು 75 ಕೋಟಿ ರೂ. ವೆಚ್ಚದಲ್ಲಿ 22 ಬೇರೆ ಬೇರೆ ಇಲಾಖೆಗಳ ಕಚೇರಿಗಳನ್ನು ಒಂದೇ ಕಡೆ ನಿರ್ಮಾಣ ಮಾಡುವ ಮೂಲಕ ಜನರಿಗೆ ತಮ್ಮ ಕೆಲಸವನ್ನು ಸುಸುತ್ರವಾಗಿ ಮಾಡಲು ಅವಕಾಶ ಕಲ್ಪಿಸಲಾಗಿದೆ“ ಎಂದರು.
”ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಫಲಾನುಭವಿಗಳ ಜೊತೆ ಚುನಾಯಿತ ಜನಪ್ರತಿನಿಧಿಗಳನ್ನು ಕೂಡಾ ಆಮಂತ್ರಿಸಲಾಗಿದೆ. ಈಗಾಗಲೇ ಚುನಾವಣೆಗೆ ಸ್ಪರ್ಧಿಸಿದ್ದ ನಾಯಕರು, ಪಕ್ಷದ ಪ್ರಮುಖರು, ನಾಯಕರ ಜೊತೆ ಸಭೆ ನಡೆಸಲಾಗಿದೆ. ಮುಖ್ಯಮಂತ್ರಿ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲು ನಿರ್ಣಯಿಸಲಾಗಿದೆ“ ಎಂದು ಮಾಹಿತಿ ನೀಡಿದರು.

About The Author

Leave a Reply