
ಕ್ಷುಲಕ ಕಾರಣಕ್ಕೆ ಇಬ್ಬರು ಯುವಕರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ನಗರದ ಖಾಕೀರ್ ಹುಸೇನ್ ವೃತ್ತದಲ್ಲಿ ನಡೆದಿದೆ.

ಕೊಲೆಯಾದ ಯುವಕನ್ನು ಜಹೀರಾಬಾದ್ ಬಡಾವಣೆಯ ನಿವಾಸಿ ಸಾದಿಕ್ (30) ಎಂದು ಗುರುತಿಸಲಾಗಿದೆ.

ರಾಯಚೂರು ನಗರದ ಏಕ್ ಮಿನಾರ್ ರಸ್ತೆಯಲ್ಲಿರುವ ಜಾಕೀರ್ ಹುಸೇನ್ ವೃತ್ತದಲ್ಲಿ ಬೆಳೆಗಿನ ಜಾವ ಪ್ರತಿನಿತ್ಯ ಇಡ್ಲಿ ತಿನ್ನಲು ಬರುತ್ತಿದ್ದ ಸಾದಿಕ್ ಹಾಗೂ ಕರೀಂ ಮತ್ತು ಸ್ನೇಹಿತರು ಇಂದು ಬೆಳಿಗ್ಗೆ ಇಡ್ಲಿ ತಿನ್ನಿಸುವ ವಿಚಾರದಲ್ಲಿ ಸಣ್ಣ ಜಗಳ ಮಾಡಿಕೊಂಡಿದ್ದಾರೆ. ಸಾದಿಕ್ ಹಾಗೂ ಕರೀಂ ನಡುವೆ ವಾಗ್ವಾದ ನಡೆದು ಏಕಾಏಕಿ ಕರೀಂ ಸಾದಿಕ್ ಎದೆಗೆ ಚಾಕುವಿನಿಂದ ಇರಿದಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದ ಸಾದಿಕ್ ನನ್ನು ರಿಮ್ಸ್ ಆಸ್ಪತ್ರೆಗೆ ಸಾಗಿಸಿದ್ದು ಮಾರ್ಗಮಧ್ಯೆಯೇ ಪ್ರಾಣ ಬಿಟ್ಟಿದ್ದಾನೆ ಎಂದು ಹೇಳಲಾಗಿದೆ.

ಬೆಳ್ಳಂಬೆಳಿಗ್ಗೆ ನಡೆದ ಕೊಲೆಯಿಂದ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ.
ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಸದರ ಬಜಾರ್ ಪೊಲೀಸರು ಘಟನೆ ಬಗ್ಗೆ ಮಾಹಿತಿ ಪಡೆದು ತನಿಖೆ ಆರಂಭಿಸಿದ್ದಾರೆ.