October 13, 2025
WhatsApp Image 2025-05-19 at 6.01.22 PM

ನೆಲ್ಯಾಡಿ:  ಕೆಎಸ್‌ಆರ್‌ಟಿಸಿ ಬಸ್‍ ಹಾಗೂ ಲಾರಿಯ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಬಸ್ ಚಾಲಕ ಸೇರಿದಂತೆ ನಾಲ್ವರು ಗಾಯಗೊಂಡಿರುವ ಘಟನೆ ನಿನ್ನೆ ಸಂಜೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಗುಂಡ್ಯ ಸಮೀಪದ ತಿರುವಿನಲ್ಲಿ ನಡೆದಿದೆ.

ಬಸ್ಸು ಚಾಲಕ  ಧರ್ಮಸ್ಥಳ ಬೆಳಾಲು ನಿವಾಸಿ ಶ್ರೀನಿವಾಸ, ನೆಲಮಂಗಲ ನಿವಾಸಿ ಸಿದ್ದಲಿಂಗಪ್ಪ, ಉಜಿರೆ ತಾಕಿಬೆಟ್ಟು ನಿವಾಸಿ, ಪ್ರಣಯ್ ಮತ್ತು ಶನಕಪುರ ನಿವಾಸಿ ಮಂಜುನಾಥ ಗಾಯಗೊಂಡಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಗಂಟೆಗಳ ಕಾಲ ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿತ್ತು.

ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸು, ಗುಂಡ್ಯ ಪೇಟೆಯಿಂದ ಸುಮಾರು 100 ಮೀಟರ್ ದೂರದಲ್ಲಿರುವ ಅಪಾಯಕಾರಿ ತಿರುವಿನಲ್ಲಿ ಎದುರಿನಿಂದ ವೇಗವಾಗಿ ಬರುತ್ತಿದ್ದ ಲಾರಿಗೆ ಮುಖಾಮುಖಿ ಢಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಬಸ್ಸಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಲಾರಿಯ ಮುಂಭಾಗಕ್ಕೂ ಹಾನಿಯಾಗಿದೆ. ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿಗಳಲ್ಲಿ ವಾಹನಗಳು ಸುಮಾರು 5 ಕಿಲೋಮೀಟರ್ ಗೂ ಹೆಚ್ಚು ದೂರ ಸಾಲುಗಟ್ಟಿ ನಿಂತಿದ್ದವು. ಇದರಿಂದಾಗಿ ಪ್ರಯಾಣಿಕರು, ವಿಶೇಷವಾಗಿ ಧರ್ಮಸ್ಥಳ, ಸುಬ್ರಹ್ಮಣ್ಯದಂತಹ ಯಾತ್ರಾಸ್ಥಳಗಳಿಗೆ ತೆರಳುತ್ತಿದ್ದವರು ಹಾಗೂ ಬೆಂಗಳೂರು, ಮಂಗಳೂರು ಕಡೆಗೆ ನಾಗುತ್ತಿದ್ದವರು ತೀವ್ರ ತೊಂದರೆ ಅನುಭವಿಸಿದರು.

ನಿನ್ನೆ ಭಾನುವಾರವಾಗಿರುವುದರಿಂದ ಈ ಹೆದ್ದಾರಿಯಲ್ಲಿ ವಾಹನ ದಟ್ಟನೆಯೂ ಅಧಿಕವಾಗಿತ್ತು. ಸ್ಥಳೀಯರು ವಾಹನಗಳನ್ನು ತೆರವುಗೊಳಿಸಿ, ಸಂಚಾರ ಸುಗಮಗೊಳಿಸಲು ಹರಸಾಹಸಪಟ್ಟರು. ಅಪಘಾತದಲ್ಲಿ ಕೆಎಸ್‍್ಆರ್‍ಟಿಸಿ ಬಸ್ಸಿನ ಚಾಲಕ ಹಾಗೂ  ಮೂವರು ಪ್ರಯಾಣಿಕರಿಗೆ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ನೆಲ್ಯಾಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

About The Author

Leave a Reply