August 30, 2025
m3

ಮಂಗಳೂರು: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ವಿಪರೀತ ಮಳೆಗೆ ಬಾಲಕಿಯೊಬ್ಬಳು ಮೃತಪಟ್ಟ ಘಟನೆ ದೇರಳಕಟ್ಟೆ ಸಮೀಪದ ಬೆಳ್ಮ ಗ್ರಾಮದ ಕಾನಕರೆ ಎಂಬಲ್ಲಿ ನಡೆದಿದೆ.

ಮೃತ ಮಗುವನ್ನು ನೌಶಾದ್ ರ ಪುತ್ರಿ ಫಾತಿಮ ನಈಮ (10) ಎಂದು ಗುರುತಿಸಲಾಗಿದೆ. ಕಾನಕರೆಯಲ್ಲಿರುವ ನೌಶಾದ್ ಅವರ ಮನೆಗೆ ಹಿಂಬದಿಯ ಗುಡ್ಡೆ, ತಡೆಗೋಡೆ ಕುಸಿದು ಬಿದ್ದಿದ್ದು, ಮನೆಯ ಕೊಠಡಿಯ ಕಿಟಕಿ ಮಗುವಿನ ಮೇಲೆ ಬಿದ್ದು ಈ ದುರಂತ ಸಂಭವಿಸಿದೆ.

ಎಡೆಬಿಡದೆ ಸುರಿದ ವಿಪರೀತ ಮಳೆಗೆ ಎರಡು ಮನೆಗಳಿಗೆ ಗುಡ್ಡ ಜರಿದು ಬಿದ್ದ ಪರಿಣಾಮ ಓರ್ವ ಮಹಿಳೆ ಮೃತ ಪಟ್ಟ ಘಟನೆ ತಾಲೂಕಿನ ಮಂಜನಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೊಂಟೆ ಪದವು ಸಮೀಪದ ಕೋಡಿ ಎಂಬಲ್ಲಿ ನಡೆದಿರುವುದು ವರದಿಯಾಗಿದೆ.

ಮೃತ ಮಹಿಳೆಯನ್ನು ಕಾಂತಪ್ಪ ಪೂಜಾರಿ ಅವರ ಪತ್ನಿ ಪ್ರೇಮ (50) ಎಂದು ಗುರುತಿಸಲಾಗಿದೆ. ಗುರುವಾರ ತಡರಾತ್ರಿ ಈ ಘಟನೆ ನಡೆದಿದ್ದು, ಕಾಂತಪ್ಪ ಪೂಜಾರಿ ಅವರ ಕುಟುಂಬ ಮಲಗಿದ್ದ ಕೊಠಡಿಯ ಭಾಗಕ್ಕೆ ಗುಡ್ಡ ಜರಿದು ಬಿದ್ದ ಪರಿಣಾಮ ಈ ದುರಂತ ಸಂಭವಿಸಿದೆ. ಕಾಂತಪ್ಪ ಪೂಜಾರಿ ಅವರ ಕಾಲಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ನಾಲ್ವರು ಮಣ್ಣಿನಡಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ತಿಳಿದು ಬಂದಿದ್ದು, ಕಾರ್ಯಾಚರಣೆ ಮುಂದುವರಿದಿದೆ. ಮಾಹಿತಿ ಮೇರೆಗೆ ಘಟನಾ ಸ್ಥಳಕ್ಕೆ ಆಗಮಿಸಿದ ಸ್ಥಳೀಯರು, ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಘಟನಾ ಸ್ಥಳಕ್ಕೆ ಎನ್ ಡಿಆರ್ ಎಫ್, ಎಸ್ ಡಿ ಆರ್ ಎಫ್ , ಉಳ್ಳಾಲ ತಾಲೂಕು ತಹಶೀಲ್ದಾರ್ ಪುಟ್ಟರಾಜು, ಕಂದಾಯ ನಿರೀಕ್ಷಕ ಪ್ರಮೋದ್ ಮತ್ತಿತರರು ಭೇಟಿ ನೀಡಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

About The Author

Leave a Reply