November 29, 2025
WhatsApp Image 2025-06-04 at 2.27.01 AM

ಬೆಂಗಳೂರು: ಕರ್ನಾಟಕ ಹಾಲು ಒಕ್ಕೂಟ ಒಂದೇ ದಿನ ಸಾರ್ವಕಾಲಿಕ ಗರಿಷ್ಠ 1.06 ಕೋಟಿ ಲೀಟರ್ ಹಾಲು ಸಂಗ್ರಹಿಸುವ ಮೂಲಕ ರಾಜ್ಯದ ಡೈರಿ ವಲಯದಲ್ಲಿ ಹೊಸ ದಾಖಲೆ ಸೃಷ್ಟಿಸಿದೆ.

ಮೇ 22 ರ ನಂತರ ಈ ದಾಖಲೆ ಸಾಧ್ಯವಾಗಿದೆ. ಅನುಕೂಲಕರವಾದ ಮುಂಗಾರು ಮಳೆ ಮತ್ತು ಹಸಿರು ಮೇವಿನ ಲಭ್ಯತೆಯ ಕಾರಣ ಈ ದಾಖಲೆ ಮಾಡುವುದು ಕೆಎಂಎಫ್‌ಗೆ ಸಾಧ್ಯವಾಗಿದೆ ಎಂದು ಹೇಳಲಾಗಿದೆ.

ಇದು ಕಳೆದ ವರ್ಷ ದಿನವೊಂದರಲ್ಲಿ ಸಂಗ್ರಹಿಸಿದ ಗರಿಷ್ಠ ಹಾಲಿಗಿಂತಲೂ ಹೆಚ್ಚು. ಕಳೆದ ವರ್ಷ ಜೂನ್ 28 ರಂದು 1 ಕೋಟಿ ಲೀಟರ್ ಹಾಲು ಸಂಗ್ರಹಿಸಲಾಗಿತ್ತು. ಆನಂತರ ದೈನಂದಿನ ಸರಾಸರಿ ಸಂಗ್ರಹ ಪ್ರಮಾಣದಲ್ಲಿ ಗಮನಾರ್ಹ ಏರಿಕೆ ಕಂಡಿತ್ತು. ಈ ಮೂಲಕ, ಹಾಲು ಉತ್ಪಾದಿಸುವ ಪ್ರಮುಖ ರಾಜ್ಯವಾಗಿ ಕರ್ನಾಟಕ ತನ್ನ ಛಾಪು ಮುಂದುವರಿಸಿದೆ ಎಂದು ಕೆಎಂಎಫ್ ತಿಳಿಸಿದೆ.

ಹಾಲಿನ ಉತ್ಪಾದನೆ ಹೆಚ್ಚಿಸಿದ ಅನುಕೂಲಕರ ಹವಾಮಾನ
ಕರ್ನಾಟಕದ ಹಲವಾರು ಪ್ರದೇಶಗಳಲ್ಲಿ ಮುಂಗಾರು ಮಳೆ ಚುರುಕುಗೊಂಡಿರುವುದು ಹಾಲಿನ ಉತ್ಪಾದನೆ ಹೆಚ್ಚಳಕ್ಕೆ ಪ್ರಮುಖ ಕಾರಣ ಎಂದು ಕೆಎಂಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹೆಚ್ಚಿನ ಪ್ರಮಾಣದಲ್ಲಿ ಮೇವಿನ ಲಭ್ಯತೆ, ಜಾನುವಾರುಗಳಲ್ಲಿ ಪೌಷ್ಟಿಕತೆ, ಆರೋಗ್ಯ ಸುಧಾರಣೆ ಹೆಚ್ಚಿನ ಹಾಲಿನ ಉತ್ಪಾದನೆದಲ್ಲಿ ಪ್ರಭಾವ ಬೀರಿದೆ. ಕೆಎಂಎಫ್ ಈಗ ನಿರಂತರವಾಗಿ ದಿನಕ್ಕೆ 1 ಕೋಟಿ ಲೀಟರ್‌ಗಿಂತಲೂ ಹೆಚ್ಚು ಹಾಲು ಸಂಗ್ರಹಿಸುತ್ತದೆ. ಇದು ರಾಜ್ಯದ ಡೈರಿ ಅಭಿವೃದ್ಧಿಯಲ್ಲಿ ಮಹತ್ವದ ಮೈಲಿಗಲ್ಲಾಗಿದೆ.

ಕೆಎಂಎಫ್ ನಿಂದ 18 ಹೊಸ ಬಗೆಯ ಕೇಕ್‌ಗಳು, ಇತರ ಹಾಲಿನ ಉತ್ಪನ್ನಗಳು ಬಿಡುಗಡೆ
ಜೂನ್ 1 ರಂದು ವಿಶ್ವ ಹಾಲು ದಿನಾಚರಣೆಯ ಅಂಗವಾಗಿ, ಕೆಎಂಎಫ್ ತನ್ನ ಜನಪ್ರಿಯ ನಂದಿನಿ ಬ್ರ‍್ಯಾಂಡ್ ಅಡಿಯಲ್ಲಿ 18 ಹೊಸ ಬಗೆಯ ಕೇಕ್‌ಗಳು ಮತ್ತು ಇತರ ಹಾಲಿನ ಉತ್ಪನ್ನಗಳನ್ನು ಬಿಡುಗಡೆ ಮಾಡಿತ್ತು. ಬಹು ಸುವಾಸನೆ ಮತ್ತು ಗಾತ್ರಗಳಲ್ಲಿ ಲಭ್ಯವಿರುವ ಈ ಉತ್ಪನ್ನಗಳು ಮಾರುಕಟ್ಟೆಯಲ್ಲಿನ ಪ್ರಮುಖ ಖಾಸಗಿ ಬ್ರ‍್ಯಾಂಡ್‌ಗಳಿಗೆ ಹೋಲಿಸಿದರೆ ಉತ್ತಮ ಗುಣಮಟ್ಟ ಮತ್ತು ಸ್ಪರ್ಧಾತ್ಮಕ ಬೆಲೆಯನ್ನು ನೀಡುತ್ತವೆ ಎಂದು ಫೆಡರೇಶನ್ ಹೇಳಿದೆ.

ಕೆಎಂಎಫ್ ಮತ್ತು ಅದರ ಅಂಗಸಂಸ್ಥೆಗಳಾದ ಹಾಲು ಒಕ್ಕೂಟಗಳು ಈಗಾಗಲೇ ಹಾಲು, ಮೊಸರು, ಮಜ್ಜಿಗೆ, ಲಸ್ಸಿ, ನಂದಿನಿ ಹಲ್ವಾ, ಬ್ರೆಡ್, ಬನ್‌ಗಳು ಮತ್ತು ಐಸ್ ಕ್ರೀಮ್ ಸೇರಿದಂತೆ 150 ಕ್ಕೂ ಹೆಚ್ಚು ಉತ್ಪನ್ನಗಳನ್ನು ಮಾರಾಟ ಮಾಡುತ್ತಿವೆ. ಇದೀಗ ಹೊಸ ಬೇಕರಿ ಉತ್ಪನ್ನಗಳ ಸೇರ್ಪಡೆಯೊಂದಿಗೆ, ಕೆಎಂಎಫ್ ಉದ್ಯಮ ಮತ್ತಷ್ಟು ವೇಗವಾಗಿ ವಿಸ್ತರಣೆಯಾದಂತಾಗಿದೆ.

ಐದು ಫ್ಲೇವರ್‌ಗಳಲ್ಲಿ ಕಪ್ ಕೇಕ್‌ಗಳು ಲಭ್ಯ
ಹೊಸದಾಗಿ ಬಿಡುಗಡೆಯಾದ ಉತ್ಪನ್ನಗಳಲ್ಲಿ ಐದು ಫ್ಲೇವರ್‌ಗಳಲ್ಲಿ ಕಪ್ ಕೇಕ್‌ಗಳು ಲಭ್ಯವಿದೆ. ವೆನಿಲ್ಲಾ, ಚಾಕೊಲೇಟ್, ಅನಾನಸ್, ಸ್ಟ್ರಾಬೆರಿ ಮತ್ತು ಮಾವಾ ಈ ಐದು ಫ್ಲೇವರ್‌ಗಳಲ್ಲಿ ಕಪ್ ಕೇಕ್‌ಗಳನ್ನು ಗ್ರಾಹಕರಿಗಾಗಿ ತಯಾರಿಸಲಾಗಿದೆ. ಪ್ರತಿಯೊಂದು ಕೇಕ್ ಅನ್ನು 150ಗ್ರಾಂ ಪ್ಯಾಕ್‌ಗಳಲ್ಲಿ ಪ್ಯಾಕಿಂಗ್ ಮಾಡಲಾಗಿದೆ.

About The Author

Leave a Reply