August 30, 2025
ded7c197-6b09-47f0-a9f7-4a8c62b67248

ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕಾಲ್ತುಳಿತ ಪ್ರಕರಣದ ಹೊಣೆಯನ್ನು ಸರ್ಕಾರ ವಹಿಸಿಕೊಳ್ಳುತ್ತದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬುಧವಾರ ಚಿನ್ನಸ್ವಾಮಿಯಲ್ಲಿ ದುರ್ಘಟನೆ ಆಗಬಾರದಿತ್ತು. ನಿರೀಕ್ಷೆ ಮೀರಿ ಅಭಿಮಾನಿಗಳು ಬಂದಿದ್ದರು. ಇನ್ನೂ ಒಳ್ಳೆಯ ಸಿದ್ಧತೆ ಮಾಡಿಕೊಳ್ಳಬೇಕಿತ್ತು. ಇದರ ಹೊಣೆಯನ್ನು ಸರ್ಕಾರ ವಹಿಸಿಕೊಳ್ಳುತ್ತದೆ. ನಮ್ಮ ಕಡೆಯಿಂದ ಲೋಪ ಆಗಿರುವುದು ಹೌದು, ಇಲ್ಲ ಎಂದು ಹೇಳಲ್ಲ. ಆದರೆ ಬಿಜೆಪಿಯವರು ಎಲ್ಲದರಲ್ಲೂ ರಾಜಕೀಯ ಮಾಡೋದು ಸರಿಯಲ್ಲ. ಅವರು ಈ ಕಲೆ ಚೆನ್ನಾಗಿ ಕರಗತ ಮಾಡಿಕೊಂಡಿದ್ದಾರೆ. ಬಿಜೆಪಿಯವರ ಆರೋಪಗಳಿಗೆ ಗಮನ ಕೊಡುವ ಅಗತ್ಯ ಇಲ್ಲ ಎಂದರು.

ನಿನ್ನೆಯ ಘಟನೆಗೆ ಸಿಎಂ, ಡಿಸಿಎಂ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಇನ್ನೂ ಒಳ್ಳೆಯ ಪ್ಲಾನಿಂಗ್ ಮಾಡಬಹುದಿತ್ತು. ಪಬ್ಲಿಕ್‌ಗೂ ಸರಿಯಾದ ಸೂಚನೆಗಳನ್ನು ಕೊಡಬಹುದಿತ್ತು. ಕಾಲಾವಕಾಶ ಕಡಿಮೆ ಇತ್ತು. ಮುಂದೆ ಇಂತಹ ಘಟನೆಗಳು ಆಗದಂತೆ ನಿಗಾ ವಹಿಸುತ್ತೇವೆ. ನಾವು ಇದರ ಜವಾಬ್ದಾರಿ ತೆಗೆದುಕೊಳ್ಳುತ್ತೇವೆ. ಬೇರೆ ಸರ್ಕಾರಗಳ ಹಾಗೆ ಅಥವಾ ಕೇಂದ್ರದ ಹಾಗೆ ನಾವು ಜವಾಬ್ದಾರಿಯಿಂದ ನುಣುಚಿಕೊಳ್ಳಲ್ಲ ಎಂದು ಹೇಳಿದರು.

ಇದೇ ಬಿಜೆಪಿಯವರು ವಿಕ್ಟರಿ ಪರೇಡ್ ಮಾಡಬೇಕಿತ್ತು. ಆರ್‌ಸಿಬಿಗೆ ಅವಮಾನ ಮಾಡ್ತಿದೀರಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಹೇಳಿದ್ದರು. ನಂತರ ಈ ಟ್ವೀಟ್ ಅನ್ನು ಬಿಜೆಪಿ ಡಿಲೀಟ್ ಮಾಡಿತ್ತು. ಡಿಸಿಎಂ ಅವರು ಆಗಲ್ಲ, ಸುರಕ್ಷತೆ ದೃಷ್ಟಿಯಿಂದ ಕಷ್ಟ ಅಂದರು. ಲೋಪಗಳಾಗಿವೆ, ಒಪ್ಪಿಕೊಳ್ಳುತ್ತೇವೆ. ದುರ್ಘಟನೆಯ ಜವಾಬ್ದಾರಿ ತೆಗೆದುಕೊಂಡಿದ್ದೇವೆ ಎಂದರು.

About The Author

Leave a Reply