August 30, 2025
4723fc5f426a821e41660ba00f5f882db501c31a6cea49df8f28e3219793b2ab

ಮಂಗಳೂರು, ಜೂನ್ 07: ಸೆಮಿನಾರ್ ತಪ್ಪಿಸಲು ಓರ್ವ ವಿದ್ಯಾರ್ಥಿನಿ (Student) ತಾನು ವ್ಯಾಸಂಗ ಮಾಡುತ್ತಿರುವ ವೈದ್ಯಕೀಯ ಕಾಲೇಜಿನಲ್ಲಿ (Medical College) ಬಾಂಬ್ ಇದೆ ಎಂದು ಹುಸಿ ಬೆದರಿಕೆ ಕರೆ ಮಾಡಿರುವ ಘಟನೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಉಳ್ಳಾಲದಲ್ಲಿ ನಡೆದಿದೆ.

ಪ್ರಕರಣ ಸಂಬಂಧ ಪೊಲೀಸರು ವಿದ್ಯಾರ್ಥಿನಿ ಡಾ.ಚಲಸಾನಿ ಮೋನಿಕಾ ಚೌಧರಿಯನ್ನು ಬಂಧಿಸಿದ್ದಾರೆ. ಡಾ.ಚಲಸಾನಿ ಮೋನಿಕಾ ಚೌಧರಿ ಜೂ.4 ರಂದು ಸೆಮಿನಾರ್ ಕೊಡಬೇಕಿತ್ತು.

ಆದರೆ, ಈ ಸಮಿನಾರ್ನಿಂದ ತಪ್ಪಿಸಿಕೊಳ್ಳಲು ಮೋನಿಕಾ ಜೂನ್ 4ರ ಬೆಳಗ್ಗೆ 8.15ಕ್ಕೆ ತಾನು ಓದುತ್ತಿರುವ ಕಣಚೂರು ಮೆಡಿಕಲ್ ಕಾಲೇಜಿನ ಹೆರಿಗೆ ವಾರ್ಡ್ನ ಸ್ಥಿರ ದೂರವಾಣಿಗೆ ಕರೆ ಮಾಡಿ, “ಬೆಳಗ್ಗೆ 11ಕ್ಕೆ ಕಣಚೂರು ಆಸ್ಪತ್ರೆ ಸ್ಫೋಟಿಸುವುದಾಗಿ” ಬೆದರಿಕೆ ಹಾಕಿದ್ದಾರೆ.

ನಂತರ, ಮೋನಿಕಾ ಚೌಧರಿಯೇ ನಮ್ಮ ಕಾಲೇಜಿಗೆ ಬಾಂಬ್ ಬೆದರಿಕೆ ಕರೆ ಬಂದಿದೆ ಎಂದು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಿದ್ದಾರೆ. ತನಿಖೆ ವೇಳೆ ತಾಂತ್ರಿಕ ವಿಶ್ಲೇಷಣೆ ನಡೆಸಿದಾಗ, ದೂರು ನೀಡಿದ ವಿದ್ಯಾರ್ಥಿನಿ ಡಾ.ಚಲಸಾನಿ ಮೋನಿಕಾ ಚೌಧರಿಯೇ ಬಾಂಬ್ ಬೆದರಿಕೆ ಹಾಕಿರುವುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಉಳ್ಳಾಲ ಪೊಲೀಸರು ಡಾ.ಚಲಸಾನಿ ಮೋನಿಕಾ ಚೌಧರಿಯನ್ನು ಬಂಧಿಸಿದ್ದಾರೆ. ಮೋನಿಕಾ ಚೌಧರಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ, ಹುಸಿ ಬಾಂಬ್ ಬೆದರಿಕೆ ಕರೆ ಮಾಡಿರುವ ಹಿಂದಿನ ಕಾರಣ ಗೊತ್ತಾಗಿದೆ.

ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿಗೆ ಬಾಂಬ್ ಬೆದರಿಕೆ ಕರೆ

ಬೆಂಗಳೂರಿನ ಪ್ರತಿಷ್ಠಿತ ಆಚಾರ್ಯ ಕಾಲೇಜಿನಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಸಂದೇಶ ಬಂದಿತ್ತು. ಅಪರಿಚಿತ ವ್ಯಕ್ತಿ ಇ-ಮೇಲ್ ಮೂಲಕ ಬೆದರಿಕೆ ಸಂದೇಶ ಕಳುಹಿಸಿದ್ದ. ಆಚಾರ್ಯ ಕಾಲೇಜಿನ ಅಧಿಕೃತ ಇ-ಮೇಲ್ ಪರಿಶೀಲನೆ ವೇಳೆ ಈ ಬೆದರಿಕೆ ಸಂದೇಶ ಗಮನಕ್ಕೆ ಬಂದಿತ್ತು. ಜೊತೆಗೆ ಕಾಲೇಜು ಪ್ರಾಂಶುಪಾಲರನ್ನು ಕತ್ತರಿಸಿ ಫ್ರಿಡ್ಜ್ನಲ್ಲಿಡುವುದಾಗಿ ಬೆದರಿಕೆ ಹಾಕಲಾಗಿತ್ತು. ಬಳಿಕ ಕಾಲೇಜಿನ ಆಡಳಿತ ಮಂಡಳಿ ಸೋಲದೇವನಹಳ್ಳಿ ಠಾಣೆಗೆ ದೂರು ನೀಡಿತ್ತು.

ರಾಯಚೂರಿನ ಜಿಲ್ಲಾಧಿಕಾರಿ ಕಚೇರಿಗೆ ಬಾಂಬ್ ಬೆದರಿಕೆ

ಅದೇ ರೀತಿಯಾಗಿ ಇತ್ತೀಚೆಗೆ ರಾಯಚೂರಿನಲ್ಲಿ ಬಾಂಬ್ ಬೆದರಿಕೆ ಇ-ಮೇಲ್ ಬಂದಿತ್ತು. ಬೆಳಿಗ್ಗೆ 6.50 ರ ಸುಮಾರಿಗೆ ರಾಯಚೂರು ಜಿಲ್ಲಾಧಿಕಾರಿಗಳ ಅಧಿಕೃತ ಖಾತೆಗೆ ಮೇಲ್ ಬಂದಿದ್ದು, ಬಾಂಬ್ ಬೆದರಿಕೆ ಒಡ್ಡಲಾಗಿತ್ತು.

ನಂತರ ಸಾರ್ವಜನಿಕರು ಭಯ ಬೀಳ್ಳುತ್ತಾರೆ ಎಂಬ ನಿಟ್ಟಿನಲ್ಲಿ ಈ ವಿಚಾರ ಗೌಪ್ಯವಾಗಿ ಇಡಲಾಗಿತ್ತು. ಬಳಿಕ ರಾಯಚೂರು ಗ್ರಾಮೀಣ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದರು. ಬಾಂಬ್ ನಿಗ್ರಹ ದಳ, ಶ್ವಾನ ದಳ ಸೇರಿದಂತೆ ಸಿಬ್ಬಂದಿಗಳು ಇಡೀ ಜಿಲ್ಲಾಧಿಕಾರಿಗಳ ಕಚೇರಿ ಪರಿಶೀಲನೆ ಮಾಡಿದ್ದರು.

About The Author

Leave a Reply