August 30, 2025
9d29c0602a48b2ea6e1c0cb5488f3857c746027e723690a22b7f1aadb402dd43

ಮಲ್ಪೆ: ಮಲ್ಪೆ ಬೀಚ್‌ನಲ್ಲಿ ಪಾನಿಪೂರಿ ತಿನ್ನುವ ವಿಚಾರದಲ್ಲಿ ಪ್ರವಾಸಿಗರು ಮತ್ತು ಅಂಗಡಿಗಳ ಮಾಲಕರ ನಡುವೆ ಮಾತಿನ ಚಕಮಕಿಯಾಗಿ ಹಲ್ಲೆ ನಡೆಸಿರುವ ಬಗ್ಗೆ ಮಲ್ಪೆ ಠಾಣೆಯಲ್ಲಿ ದೂರು, ಪ್ರತಿದೂರು ದಾಖಲಾಗಿದೆ.

ಮಲ್ಪೆ ಬೀಚ್‌ನ ಪಾನಿಪೂರಿ ಅಂಗಡಿ ಒಂದರಲ್ಲಿ ಮಂಗಳವಾರ ರಾತ್ರಿ 8.30ರ ಸುಮಾರಿಗೆ ಆಪಾದಿತರಾದ ಸುದೀಪ, ಸಂಪತ್‌, ಪುನೀತ್‌, ಮಹೇಶ, ಕನ್ನ ವೈ.ಜಿ.

 

ಮತ್ತು ಅರವಿಂದ ಅವರು 6 ಪಾನಿಪೂರಿ ತಿಂದು ಅದರ ಹಣ ಕೊಡದೆ ಹೆಚ್ಚುವರಿ ಪಾನಿಪೂರಿ ನೀಡುವಂತೆ ಕೇಳಿದರು. ಇದಕ್ಕೆ ಅಂಗಡಿಯವರು ಒಪ್ಪದಿದ್ದಾಗಿ ಅವರು ಅವಾಚ್ಯವಾಗಿ ಬೈದು, ಹಲ್ಲೆ ನಡೆಸಿ, ಜೀವ ಬೆದರಿಕೆ ಒಡ್ಡಿ ತೆರಳಿದರು.

 

10 ನಿಮಿಷಗಳ ಅನಂತರ ಮರಳಿ ಬಂದ ಅವರಲ್ಲಿ ಅಂಗಡಿ ಮಾಲಕರು ಹಣ ಕೇಳಿದರು. ಇದೇ ವೇಳೆ ಪಕ್ಕದಲ್ಲೇ ಅಂಗಡಿ ಇಟ್ಟುಕೊಂಡಿರುವ ರಮೇಶ್‌,

ವಿನೋದ್‌ ಅವರ ಮೇಲೂ ಈ ಆಪಾದಿತರು ಹಲ್ಲೆ ಮಾಡಿದರು. ಅಷ್ಟರಲ್ಲಿ ಜನ ಸೇರುತ್ತಿರುವುದನ್ನು ಕಂಡು ಅವರು ವಾಪಸ್‌ ಹೋಗಿದ್ದಾರೆ ಎಂದು ಅಂಗಡಿ ಮಾಲಕ ಉತ್ತರ ಪ್ರದೇಶದ ಮೂಲದ ಮೋನು ಸಾಹು ದೂರಿನಲ್ಲಿ ತಿಳಿಸಿದ್ದಾರೆ.

 

ಪ್ರತಿದೂರು
ಮಲ್ಪೆ ಬೀಚ್‌ನ ಪಾನಿಪೂರಿ ಆಂಗಡಿಯೊಂದರಲ್ಲಿ ಪಾನಿಪೂರಿ ತಿಂದು ಹೆಚ್ಚುವರಿಯಾಗಿ ಒಂದು ಪಾನಿಪೂರಿಯನ್ನು ನಮ್ಮಲ್ಲಿನ ಸಂಪತ್‌ ಎಂಬವರು ಕೇಳಿದಾಗ ಅಂಗಡಿಯಲ್ಲಿದ್ದ ವ್ಯಕ್ತಿ ಒಂದು ಪಾನಿಪೂರಿ ಕೊಡಲು ಬರುವುದಿಲ್ಲ ಎಂದು ಹೇಳಿದಾಗ ಸಂಪತ್‌ಗೂ ಅಂಗಡಿಯವನಿಗೂ ಜಗಳವಾಗಿದೆ. ಅಲ್ಲಿಗೆ ಬಂದ ರಮೇಶ್‌ ಎನ್ನುವ ವ್ಯಕ್ತಿ ಬ್ಯಾಟಿನಿಂದ ನಮ್ಮ ಜತೆಯಿದ್ದ ಅರವಿಂದನ ಎದೆ ಮತ್ತು ಬೆನ್ನಿಗೆ ಹೊಡೆದ. ಬಿಡಿಸಲು ಹೋದ ನನಗೂ ಹಲ್ಲೆ ಮಾಡಿದ್ದಾನೆ.

ನನ್ನ ತಲೆಗೆ ತೀವ್ರ ಗಾಯ ಉಂಟಾಗಿ ತತ್‌ಕ್ಷಣ ಚಿಕಿತ್ಸೆ ನೀಡಲಾಗಿತ್ತು. ಜಗಳದ ಸಮಯದಲ್ಲಿ ಹೊಡೆದವರು ಮತ್ತು ಬೈದವರು ಅವರಾಡುವ ಮಾತುಗಳಿಂದ ಅಲ್ಲಿದ್ದ ವರ ಹೆಸರುಗಳು ಮೋನು, ರಮೇಶ, ವಿನೋದ ಎಂದು ತಿಳಿದು ಬಂದಿದೆ ಎಂದು ಪ್ರವಾಸಿಗರಾದ ಮಂಡ್ಯದ ಸುದೀಪ್‌ ಅವರು ನೀಡಿದ ದೂರಿನಲ್ಲಿ ತಿಳಿಸಲಾಗಿದ್ದು ಈ ಎರಡು ಪ್ರಕರಣ ದಾಖಲಾಗಿದೆ.

About The Author

Leave a Reply