November 29, 2025
wmremove-transformed (2)

ಉಡುಪಿ, ಜೂ. 14 : ಮನೆ ಸೋರಿಕೆಯನ್ನು ಪರಿಶೀಲಿಸಲು ಬಳಸುತ್ತಿದ್ದ ಕ್ರೇನ್ ಬಾಸ್ಕೆಟ್‌ನಿಂದ ಬಿದ್ದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು, ಕಾರ್ಮಿಕ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಉಡುಪಿಯ ಕೋರ್ಟ್ ಬ್ಯಾಕ್ ರಸ್ತೆಯಲ್ಲಿರುವ ಲೋಕೋಪಯೋಗಿ ಇಲಾಖೆ (ಪಿಡಬ್ಯೂಡಿ) ಕಚೇರಿ ಬಳಿ ಜೂನ್ 14 ರಂದು ನಡೆದಿದೆ.

ಮನೆಯ ಮೇಲ್ಛಾವಣಿಯ ಸ್ಲ್ಯಾಬ್‌ನಲ್ಲಿನ ಸೋರಿಕೆಯನ್ನು ಪರಿಶೀಲಿಸಲು ಕ್ರೇನ್ ಅನ್ನು ಬಳಸಿಕೊಂಡು ಇಬ್ಬರು ವ್ಯಕ್ತಿಗಳನ್ನು ಅದರ ಬಾಸ್ಕೆಟ್‌ನಲ್ಲಿ ಮೇಲೆತ್ತಲಾಗುತ್ತಿತ್ತು. ಆದರೆ ಈ ವೇಳೆ ಬಾಸ್ಕೆಟ್ ಓರೆಯಾದ ಕಾರಣ, ಅದರಲ್ಲಿದ್ದ ಇಬ್ಬರೂ ಕೆಳಗೆ ಬಿದ್ದಿದ್ದಾರೆ.

ಸ್ಥಳಕ್ಕೆ ಧಾವಿಸಿದ ಸ್ಥಳೀಯ ಸಮಾಜ ಸೇವಕ ನಿತ್ಯಾನಂದ ಒಳಕಾಡು, ಗಾಯಗೊಂಡವರನ್ನು ತಕ್ಷಣ ಅಜ್ಜರಕಾಡು ಜಿಲ್ಲಾ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಅದಾಗಲೇ ಗಂಭೀರವಾಗಿ ಗಾಯಗೊಂಡಿದ್ದ ಫ್ರಾನ್ಸಿಸ್ ಫುರ್ಟಾಡೊ (65) ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಮೃತರು ಮನೆಯ ಮಾಲೀಕರ ಸಹೋದರ ಎಂದು ಹೇಳಲಾಗಿದೆ.

ಇನ್ನೊಬ್ಬ ಗಾಯಾಳು ಮಲ್ಪೆಯ ಕಲ್ಮಾಡಿ ಮೂಲದ ಗೀತಾ (35) ಅವರಿಗೆ ಗಂಭೀರ ಗಾಯಗಳಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.

ಕ್ರೇನ್ ಆಪರೇಟರ್ ಸಂತ್ರಸ್ತರನ್ನು ರಕ್ಷಿಸಲು ಪ್ರಯತ್ನಿಸದೆ ಕ್ರೇನ್‌ನೊಂದಿಗೆ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ.

About The Author

Leave a Reply