October 13, 2025
WhatsApp Image 2025-06-17 at 1.03.35 PM

ಮಂಗಳೂರು: ಮಂಗಳೂರಿನಲ್ಲಿ ಸೋಮವಾರ ಮಳೆ ಅಬ್ಬರ ತುಸು ತಡಿಮೆಯಾಗಿದ್ದರೂ ಗುಡ್ಡ ಕುಸಿತ ಸಂಭವಿಸಿದೆ. ಮಂಗಳೂರು ಸಮೀಪದ ಕಣ್ಣೂರಿನ ದಯಂಬು ಎಂಬಲ್ಲಿ ಗುಡ್ಡ ಕುಸಿದು ಮನೆ ಮೇಲೆ ಬಿದ್ದಿದ್ದು, ಕುಟುಂಬವೊಂದು ಕೂದಲೆಲೆ ಅಂತರದಲ್ಲಿ ಪಾರಾಗಿದೆ. ಗುಡ್ಡದ ಕೆಳಭಾಗದಲ್ಲೇ ಇದ್ದ ಮನೆಯಲ್ಲಿ ವಾಸವಿದ್ದ ಕುಟುಂಬದವರು, ಗುಡ್ಡ ಕುಸಿತದ ಸದ್ದು ಕೇಳುತ್ತಿದ್ದಂತೆಯೇ ಓಡಿಹೋಗಿ ಬಚಾವಾಗಿದ್ದಾರೆ. ಮೂರು ಮನೆಗಳಿಗೆ ಕುಸಿತದಿಂದ ಹಾನಿಯಾಗಿದೆ. ಕಳೆದ ಶನಿವಾರದಿಂದೀಚೆಗೆ ಸುರಿಯುತ್ತಿರುವ ಭೀಕರ ಮಳೆಗೆ ಮಂಗಳೂರು ನಗರದಲ್ಲಿ ಅನೇಕ ಅನಾಹುತಗಳು ಸಂಭವಿಸದ್ದು, ಜನರು ತತ್ತರಿಸಿ ಹೋಗಿದ್ದಾರೆ.

ಭಾರಿ ಮಳೆಯ ಕಾರಣ ಜಲಪಾತದಂತೆ ನೀರು ಹರಿದು ಮಣ್ಣು ಸಡಿಲಗೊಂಡು ಗುಡ್ಡ ಕುಸಿತ ಸಂಭವಿಸಿದೆ. ಗುಡ್ಡದ ಕೆಳಭಾಗದಲ್ಲೇ ಇದ್ದ ಮನೆಯ ಹಿಂಬದಿಯ ಗೋಡೆಯನ್ನು ಸೀಳಿ ಮನೆಯೊಳಗೆ‌ ಮಣ್ಣು, ನೀರು ನುಗ್ಗಿದೆ. ನೀರು ಬರುತ್ತಲೇ ಕುಟುಂಬದ ಸದಸ್ಯರು ಮನೆಯಿಂದ ಓಡಿ ಜೀವ ಉಳಿಸಿಕೊಂಡಿದ್ದಾರೆ.

ಈ ಪ್ರದೇಶದಲ್ಲಿ ಭಾರಿ ಮಳೆ ಬಂದಾಗ ಗುಡ್ಡದಿಂದ ಜಲಪಾತದ ರೀತಿ ನೀರು ಹರಿಯುತ್ತದೆ. ಇಲ್ಲಿ ಮಳೆ ನೀರು ಹೋಗಲು ಚರಂಡಿ ವ್ಯವಸ್ಥೆ ಇಲ್ಲ. ನೀರು ಮನೆಯ ಅಂಗಳದಲ್ಲೇ ಹರಿದು ಹೋಗುತ್ತಿದೆ. ಮರಗಳು ಅಲುಗಾಡಿದಾಗ ಮಣ್ಣು ಸಡಿಲಗೊಂಡು ಗುಡ್ಡ ಕುಸಿಯುತ್ತಿದೆ. ನೀರು ಭಾರಿ ಪ್ರಮಾಣದಲ್ಲಿ ಹರಿದು ಬಂದು ಮಣ್ಣು ಕುಸಿದಿದೆ.

ಗುಡ್ಡ ಕುಸಿತದಿಂದ ಮೈಮೂನಾ ಎಂಬವರ ಮನೆಗೆ‌ ಸಂಪುರ್ಣ ಹಾನಿಯಾಗಿದೆ. ಅಸ್ಮಾ ಮತ್ತು ಮಹಮ್ಮದ್‌ ಸಾದಿಕೆ ಎಂಬವರ ಮನೆಗಳಗೂ ಹಾನಿ ಸಂಭವಿಸಿದೆ. ಈ ಮನೆಯ ಕೆಲವರು ಮದುವೆ ಸಮಾರಂಭಕ್ಕೆ ತೆರಳಿದ್ದರು ಎನ್ನಲಾಗಿದೆ. ಹೀಗಾಗಿ ದೊಡ್ಡ ಅನಾಹುತ ತಪ್ಪಿದೆ. ಮನೆಯ ಅಡುಗೆ ಕೋಣೆ ಸಂಪೂರ್ಣವಾಗಿ ಕುಸಿದು ಹೋಗಿದ್ದು, ಪೂರ್ತಿ ಕೆಸರುಮಯವಾಗಿದೆ. ಮನೆಯೊಳಗೆ ಗುಡ್ಡದ ಕೆಸರು ನೀರು ಹಳ್ಳದಂತೆ ಹರಿಯುತ್ತಿದೆ. ಎಲೆಕ್ಟ್ರಾನಿಕ್ ವಸ್ತುಗಳು, ಪೀಠೋಪಕರಣಗಳಿಗೆ ಸಂಪೂರ್ಣ ಹಾನಿಯಾಗಿದೆ. ಮನೆಯ ಮೇಲ್ಚಾವಣಿ ಪೂರ್ತಿಯಾಗಿ ಕುಸಿದು ಹೋಗಿದೆ. ಈ ಪ್ರದೇಶದಲ್ಲಿ ಇನ್ನಷ್ಟು ಗುಡ್ಡ ಕುಸಿಯುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ದಯಂಬುವಿನ ಗುಡ್ಡ ಬಹಳ ವಿಸ್ತಾರವಾಗಿದ್ದು, ಗುಡ್ಡಕ್ಕೆ ಒತ್ತಿಕೊಂಡೇ ಸುಮಾರು 40ರಷ್ಟು ಮನೆಗಳಿವೆ. ನಿನ್ನೆ ಗುಡ್ಡದ ಪಕ್ಕದ ಮೂರು ಮನೆಗಳಿಗೆ ಕುಸಿತದಿಂದ ಹಾನಿ ಸಂಭವಿಸಿದೆ. ಇನ್ನಷ್ಟು ಕುಸಿತವಾದರೆ ಸುತ್ತಮುತ್ತಲಿನ ಹಲವು ಮನೆಗಳಿಗೆ ಅಪಾಯವಾಗುವ ಆತಂಕವಿದೆ. ಗುಡ್ಡಕ್ಕೆ ಒತ್ತಿಕೊಂಡು ಇರುವ ಮನೆಯವರನ್ನು ಸ್ಥಳಾಂತರಗೊಳ್ಳಲು ಸೂಚಿಸಲಾಗಿದೆ. ಕೆಲವರು ಈಗಾಗಲೇ ಬಂಧುಗಳ ಮನೆಗಳಲ್ಲಿ ಆಶ್ರಯ ಪಡೆದಿದ್ದಾರೆ.

About The Author

Leave a Reply