August 30, 2025
1661017334_medicine
ಮಂಗಳೂರು, ಜೂ. 28 : ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಬಹುತೇಕ ಇಎಸ್‌ಐ ಆಸ್ಪತ್ರೆಗಳು ಮತ್ತು ಔಷಧಾಲಯಗಳು ಅಗತ್ಯ ಔಷಧಿಗಳ ಕೊರತೆಯನ್ನು ಎದುರಿಸುತ್ತಿದೆ. ಇದರಿಂದಾಗಿ ರೋಗಿಗಳಿಗೆ, ವಿಶೇಷವಾಗಿ ಈ ಸರ್ಕಾರಿ ಸೌಲಭ್ಯಗಳನ್ನು ಹೆಚ್ಚು ಅವಲಂಬಿಸಿರುವ ಕಾರ್ಮಿಕ ವರ್ಗದವರಿಗೆ ತೊಂದೆಯುಂಟಾಗಿದೆ.ಇಎಸ್‌ಐ ಔಷಧಾಲಯಗಳಲ್ಲಿ ರೋಗಿಗಳಿಗೆ ದಿನ ಬಳಕೆಯ ಔಷಧಗಳು ಕೆಲವು ವಾರಗಳಿಂದ ಸಿಗುತ್ತಿಲ್ಲ. ಇದರಿಂದಾಗಿ ರೋಗಿಗಳು ಹೆಚ್ಚಿನ ಹಣ ಕೊಟ್ಟು ಖಾಸಗಿ ಔಷಧಾಲಯಗಳಲ್ಲಿ ಖರೀದಿಸಬೇಕಾಗಿದೆ.ಮಂಗಳೂರಿನ ಶಿವಬಾಗ್ ಬಳಿ ಇಎಸ್‌ಐ ಆಸ್ಪತ್ರೆ ಇದ್ದು, ಪುತ್ತೂರು, ಕುಲಶೇಖರ, ಪಣಂಬೂರು, ಕದ್ರಿ, ಬಿಜೈ, ಮೋರ್ಗನ್ಸ್ ಗೇಟ್, ಮಣಿಪಾಲ, ಕಾರ್ಕಳ, ಕುಂದಾಪುರ ದಲ್ಲಿ ಡಿಸ್ಪೆನ್ಸರಿಗಳು ಇವೆ. ಇವುಗಳ ವೈದ್ಯರಿಂದ ರೋಗಿಗಳು ತಪಾಸಣೆ ನಡೆಸಿ, ಅಲ್ಲಿಯೇ ಔಷಧ ಪಡೆಯಬೇಕು. ಆ ವೇಳೆ ಹೃದಯ, ಮಧುಮೇಹ ಕಾಯಿಲೆಗಳ ‘ಔಷಧ ಸ್ಟಾಕ್ ಇಲ್ಲ’ ಎಂದು ಹೇಳಲಾಗುತ್ತಿದೆ.ಸುಳ್ಯ ಇಎಸ್‌ಐಸಿಯಲ್ಲಿ ಎರಡೂವರೆ ತಿಂಗಳಿನಿಂದ ಔಷಧಗಳ ಸರಬರಾಜು ಆಗದೇ ಇರುವುದರಿಂದ ಚಿಕಿತ್ಸಾಲಯದಲ್ಲಿ ಪ್ರಮುಖ ಸಾಮಾನ್ಯ(ಅಗತ್ಯ) ಔಷಧ ಕೊರತೆ ಎದುರಾಗಿದೆ. ಸುಳ್ಯದ ಈ ಚಿಕಿತ್ಸಾಲಯಕ್ಕೆ ಈ ಹಿಂದೆ ವರ್ಷಕ್ಕೆ ಸುಮಾರು 3,000ಕ್ಕೂ ವಿವಿಧ ಬಗೆಯ ಔಷಧಗಳು ಸರಬರಾಜಾಗುತ್ತಿತ್ತು.ಪ್ರಮುಖವಾಗಿ ಜ್ವರ, ಶೀತ, ತಲೆನೋವು, ಮೈ-ಕೈ ನೋವು, ವಿವಿಧ ಬಗೆಯ ಸಿರಾಪು ಬೇಕಿದ್ದು, ಈ ಬಗ್ಗೆ ಈಗಾಗಲೇ ಚಿಕಿತ್ಸಾಲಯದ ಕಡೆಯಿಂದ ಬೇಡಿಕೆ ಸಲ್ಲಿಸಲಾಗಿದೆ. ಆದರೂ ಸರಬರಾಜು ಆಗಿಲ್ಲ. ಸಾಮಾನ್ಯ ಔಷ ಧಗಳು ಸೇರಿದಂತೆ ಚಿಕಿತ್ಸಾಲಯದಿಂದ ಸುಮಾರು 103ಕ್ಕೂ ಹೆಚ್ಚಿನ ಬಗೆಯ ಔಷಧಗಳ ಬೇಡಿಕೆ ಬಗ್ಗೆ ಪತ್ರ ಸಲ್ಲಿಸಲಾಗಿದೆ ಎಂದು ಆಸ್ಪತ್ರೆಯವರು ಮಾಹಿತಿ ನೀಡಿದ್ದಾರೆ.’ಇಎಸ್‌ಐ ಆಸ್ಪತ್ರೆ, ಔಷಧಾಲಯಗಳಲ್ಲಿ ಕೆಲವು ಔಷಧ ಸಿಗುತ್ತಿಲ್ಲ ಎಂಬ ಮಾಹಿತಿ ಇಲ್ಲ. ಈ ಕುರಿತು ಕಾರ್ಮಿಕ ಇಲಾಖೆಯ ಅಧಿಕಾರಿಗಳ ಬಳಿ ಮಾಹಿತಿ ಪಡೆಯುವೆ. ಒಂದು ವೇಳೆ ಔಷಧ ಕೊರತೆ ಇದ್ದರೆ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳುವೆ’ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.’ಇಎಸ್‌ಐ ಆಸ್ಪತ್ರೆಯಲ್ಲಿ ಔಷಧ ಕೊರತೆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆಗೆ ಪರಿಹಾರಕ್ಕೆ ಸೂಚಿಸಲಾಗುವುದು’ ಎಂದು ಕ್ಯಾಪ್ಟನ್ ಬ್ರಿಜೇಶ್ ಚೌಟ ತಿಳಿಸಿದ್ದಾರೆ.

About The Author

Leave a Reply