
ಪುತ್ತೂರು-ವಿಟ್ಲ ಮಾರ್ಗದ ಕೋಡಪದವು–ಮದಕದವರೆಗೆ ಮಾತ್ರ ನಿರ್ವಹಿಸಲಾಗುತ್ತಿರುವ KSRTC ( ಸರಕಾರಿ) ಬಸ್ಸು ಸಂಚಾರವನ್ನು ತಾಳಿತ್ತನೂಜಿ ದೇವಸ್ಯ ಜಂಕ್ಷನ್‌ವರೆಗೆ ವಿಸ್ತರಿಸಿ ಸಂಜೆಯ ವೇಳೆಯಲ್ಲಿಯೂ ಬಸ್ಸು ಸೇವೆ ಕಲ್ಪಿಸುವಂತೆ ಶಾಸಕ ಶ್ರೀ ಅಶೋಕ್ ರೈ ಅವರ ಮೂಲಕ ಪುತ್ತೂರು ವಿಭಾಗಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಈ ಬಗ್ಗೆ ಕೊಳ್ನಾಡು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀ ಕೆ.ಎ. ಅಸ್ಮ ಹಸೈನಾರ್ ತಾಳಿತ್ತನೂಜಿ ಅವರು ಶಾಸಕ ಅಶೋಕ್ ರೈ ಮೂಲಕ ಅಧಿಕೃತ ಮನವಿಯನ್ನು ಸಲ್ಲಿಸಿದರು. ಅವರು ಮನವಿಯಲ್ಲಿ, ಕಳೆದ ಎರಡು ವರ್ಷಗಳ ಹಿಂದೆ ಪುತ್ತೂರು ಡಿಪ್ಪೋದಿಂದ ವಿಟ್ಲ ಮಾರ್ಗವಾಗಿ ಕೋಡಪದವು ಮದಕದವರೆಗೆ ಇದ್ದ ಬಸ್ಸು ಸಂಚಾರವನ್ನು ತಾಳಿತ್ತನೂಜಿ ದೇವಸ್ಯ ಜಂಕ್ಷನ್‌ಗೆ ವಿಸ್ತರಿಸಿ ಬೆಳಗಿನ ವೇಳೆ ಮಾತ್ರ ಬಸ್ಸು ಸಂಚರಿಸುತ್ತಿದ್ದು, ಸಂಜೆಯ ಬಸ್ಸು ವಿಟ್ಲದಿಂದ ತಿರುಗಿ ಹೋಗುತ್ತಿರುವುದರಿಂದ, ಈ ಭಾಗದ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ನಾಗರಿಕರಿಗೆ ನಿರ್ದಿಷ್ಟವಾಗಿ ಸಂಜೆಯ ಸಮಯದಲ್ಲಿ ತೀವ್ರ ಅಸೌಕರ್ಯ ಉಂಟಾಗುತ್ತಿದೆ ಎಂಬುದನ್ನು ಉಲ್ಲೇಖಿಸಿದರು.

ಈ ಭಾಗದ ಶಾಲಾ ಮಕ್ಕಳಿಗೆ ಸರಕಾರಿ ಬಸ್ಸಿನ ಅಗತ್ಯತೆ ಎಷ್ಟಿದೆಯೆಂದರೆ ಹೆಚ್ಚು ವೆಚ್ಚದ ಆಟೋ ರಿಕ್ಷಾ,ಖಾಸಗಿ ವಾಹನಗಳಲ್ಲಿ ಪ್ರಯಾಣಿಸಲು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ನಿರ್ಬಂಧಿತರಾಗಿ,ನಾಲ್ಕು ಪಟ್ಟು ಹೆಚ್ಚು ಹಣವನ್ನು ಖರ್ಚು ಮಾಡಬೇಕಾಗುತ್ತದೆ.ಅಲ್ಲದೆ ತೀವ್ರ ಸಮಯ ವ್ಯಯವಾಗುತ್ತಿದೆ ಹಾಗೂ ಮನೆಗೆ ತಲುಪುವಾಗ ಕತ್ತಲಾಗುವ ಅಪಾಯದ ಪರಿಸ್ಥಿತಿಯೂ ಎದುರಾಗುತ್ತಿದೆ. ಈ ಹಿನ್ನೆಲೆಯಲ್ಲಿ, ವಿಟ್ಲದಿಂದ ತಾಳಿತ್ತನೂಜಿ ದೇವಸ್ಯ ಜಂಕ್ಷನ್‌ವರೆಗೆ ಸಂಜೆಯ ವೇಳೆಯಲ್ಲಿ, ವಿಶೇಷವಾಗಿ ಸಂಜೆ 4:30 ರ ವೇಳೆಗೆ ಬಸ್ಸು ಸಂಚರಿಸುವಂತೆ ಕ್ರಮ ಕೈಗೊಳ್ಳಬೇಕೆಂದು ಅವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ, ಈ ಹಿಂದೆ ಇದೇ ಕುರಿತಾಗಿ ಎರಡು ಬಾರಿ ಪುತ್ತೂರು ವಿಭಾಗದ KSRTC ವಿಭಾಗ ಅಧಿಕಾರಿಗಳಿಗೆ ಹಾಗೂ ಸಂಬಂಧಿತ ಪ್ರಾಧಿಕಾರಗಳಿಗೆ ಲಿಖಿತ ಮನವಿ ಸಲ್ಲಿಸಿದ್ದರೂ ಯಾವುದೇ ಸೂಕ್ತ ಪ್ರತಿಕ್ರಿಯೆ ಬಂದಿಲ್ಲವೆಂಬುದನ್ನೂ ಅವರು ಈ ಹಿಂದೆ ಸಲ್ಲಿಸಿದ ದಾಖಲೆಗಳನ್ನು ತೋರಿಸಿ ವಿವರಿಸಿದರು. ಜೊತೆಗೆ ಬೆಳಿಗ್ಗೆ ಬಸ್ಸು ಶಾಲಾ ಮಕ್ಕಳಿಗೆ ಬಸ್ಸು ಸಂಚರಿಸುವ ವೇಳೆಯಲ್ಲಿ ಅನುಕೂಲವಾಗುವಂತೆ ಸಣ್ಣ ಬದಲಾವಣೆ ಮಾಡುವ ಕುರಿತು ಸಲಹೆಯನ್ನೂ ನೀಡಿದರು.ಶಾಸಕರು ಎಲ್ಲಾ ಮನವಿಯನ್ನು ಸಂಯಮಚಿತ್ತದಿಂದ ಆಲಿಸಿ ಸಂಜೆಯ ಬಸ್ಸು ಸೇವೆ ಸ್ಥಾಪನೆ ಕುರಿತು ಈ ತಿಂಗಳೊಳಗೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಈ ಸಂಧರ್ಭದಲ್ಲಿ, ತಾಳಿತ್ತನೂಜಿಗೆ ಬೆಳಗಿನ ಬಸ್ಸು ವಿಸ್ತರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಸಾಮಾಜಿಕ ಕಾರ್ಯಕರ್ತ ಶ್ರೀ ಹಸೈನಾರ್ ತಾಳಿತ್ತನೂಜಿ,ಪೂರ್ಣೇಶ್ ಭಂಡಾರಿ,ನಾಸೀರ್ ಕೋಲ್ಪೆ ಉಪಸ್ಥಿತರಿದ್ದರು