

ಮಹಿಳೆಯೋರ್ವಳು ಹಲವು ಚಿನ್ನದಂಗಡಿಗಳ ಮಾಲಕರನ್ನು ನಂಬಿಸಿ, ಚಿನ್ನಾಭರಣ ಖರೀದಿಸಿ ಲಕ್ಷಾಂತರ ರೂ. ವಂಚಿಸಿರುವ ಘಟನೆ ಉಡುಪಿ ಜಿಲ್ಲೆಯ ಶಿರ್ವದಲ್ಲಿ ನಡೆದಿದೆ. ಶಿರ್ವ ಮಸೀದಿ ಬಳಿ ನಿವಾಸಿ ಫರೀದಾ ವಂಚನೆಗೈದ ಮಹಿಳೆ.
ಈಕೆ ಚಿನ್ನದಂಗಡಿಗೆ ಕಾಲ್ ಮಾಡಿ ತಾನು ಮಸೀದಿ ಬಳಿಯ ನಿವಾಸಿ, ಮಗುವಿನ ನಾಮಕರಣವಿದ್ದು ಮಗುವಿಗೆ ಚೈನ್, ಉಂಗುರ ಮತ್ತು ಬಳೆ ಬೇಕಾಗಿದೆ. ನನಗೆ ಅಂಗಡಿಗೆ ಬರಲಾಗುವುದಿಲ್ಲ. ಸೋದರ ಸಂಬಂಧಿಯನ್ನು ಕಳಿಸ್ತೇನೆ. ಭದ್ರತೆಗಾಗಿ ಚೆಕ್ ಕೂಡಾ ಕಳಿಸ್ತೇನೆ. ಬಿಲ್ ಮೊತ್ತವನ್ನು ಮಾಲಕರ ಖಾತೆಗೆ ಹಾಕ್ತೇನೆ ಎಂದು ನಂಬಿಸಿದ್ದಳು.
ಅದೇ ರೀತಿ ಯುವಕನೋರ್ವ ಬಂದಿದ್ದು ಈ ಮೊದಲೇ ಮಾತುಕತೆಯಾಗಿದೆ ಅಲ್ವಾ ಎಂದು ಆಭರಣಗಳ ಫೋಟೋ ತೆಗೆದು ಫರೀದಾ ಅವರಿಗೆ ವಾಟ್ಸಪ್ ನಲ್ಲಿ ಕಳುಹಿಸಿದ್ದಾರೆ. ಆಕೆ ಮೊಬೈಲ್ ನಲ್ಲೇ ಚಿನ್ನ ಆಯ್ಕೆ ಮಾಡಿದ ನಂತರ ಬಂದಿದ್ದ ಅಪ್ಸಲ್ ಎಂಬ ಯುವಕ ಆಕೆ ನೀಡಿದ್ದ ಚೆಕ್ ನೀಡಿ ಮೂರು ಲಕ್ಷಕ್ಕೂ ಅಧಿಕ ಬೆಲೆ ಬಾಳುವ ಚಿನ್ನವನ್ನು ತೆಗೆದುಕೊಂಡು ಹೋಗಿದ್ದಾನೆ.
ನಂತರ ಫರೀದಾ ಕಾಲ್ ಮಾಡಿ ಮಾಲಕರ ಖಾತೆಗೆ ೪.೫ ಲಕ್ಷ ರೂ ಪಾವತಿಸಿದ್ದೇನೆ ಎಂದು ಬ್ಯಾಂಕ್ ಕೌಂಟರ್ ಸ್ಲಿಪ್ ಕಳುಹಿಸಿದ್ದಾಳೆ. ಈ ಮಧ್ಯೆ ಅಂಗಡಿ ಮಾಲಿಕ ಬ್ಯಾಂಕ್ ಗೆ ಹೋಗಿ ವಿಚಾರಿಸಿದಾಗ ಚೆಕ್ ಕ್ಲಿಯರ್ ಆಗಲು ಒಂದೆರಡು ದಿನ ಬೇಕು ಎಂದಿದ್ದಾರೆ. ಕೊನೆಗೂ ಹಣ ಬಾರದಿದ್ದಾಗ ಇವರು ಮೋಸ ಹೋಗಿರುವುದು ಗೊತ್ತಾಗಿದೆ. ಈಕೆ ಇದೇ ರೀತಿ ಹಲವು ಚಿನ್ನದ ಅಂಗಡಿಗಳಿಗೆ ಮೋಸ ಮಾಡಿದ್ದು ಈಕೆಯ ವಿರುದ್ಧ ದೂರು ದಾಖಲಿಸಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.






