ಉಳ್ಳಾಲ: ಒಂಟಿಯಾಗಿ ವಾಸವಿದ್ದ ಮಹಿಳೆಯ ಹತ್ಯೆ- ಆರೋಪಿ ಪೊಲೀಸರ ವಶಕ್ಕೆ

ಉಳ್ಳಾಲ: ಮೊಂಟೆಪದವು ಸಮೀಪ ಒಂಟಿಯಾಗಿ ವಾಸವಿದ್ದ ಮಹಿಳೆಯನ್ನು ಹತ್ಯೆಗೈದು ಮೃತದೇಹವನ್ನು ಬಾವಿಗೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು ಕೃತ್ಯ ನಡೆದ ಎರಡು ತಿಂಗಳ ಬಳಿಕ ಕೊಣಾಜೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆರೋಪಿಯು ಬಿಹಾರ ಮೂಲದ ವ್ಯಕ್ತಿಯಾಗಿದ್ದು, ಸ್ಥಳೀಯವಾಗಿ ಗಾರೆ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮೊಂಟೆಪದವು ಸಮೀಪ ಮೇ 29ರಂದು ಬಾವಿಯೊಂದರಲ್ಲಿ ಸೊಂಟಕ್ಕೆ ಕಲ್ಲುಗಳನ್ನು ಕಟ್ಟಿದ ಸ್ಥಿತಿಯಲ್ಲಿ ಸಕಲೇಶಪುರ ಮೂಲದ ಸುಂದರಿ(36) ಎಂಬವರ ಮೃತದೇಹ ಪತ್ತೆಯಾಗಿತ್ತು. ಅತ್ಯಾಚಾರ ಎಸಗಿ ಹತ್ಯೆ ನಡೆಸಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು.

ಮೊಂಟೆಪದವು ಸಮೀಪ ಬಾಡಿಗೆ ಮನೆಯಲ್ಲಿ ಒಂಟಿಯಾಗಿ ವಾಸವಿದ್ದ ಸುಂದರಿ ಸುಮಾರು ಒಂದೂವರೆ ವರ್ಷಗಳಿಂದ ಮನೆಮನೆಗಳಿಗೆ ತೆರಳಿ ಕೆಲಸ ನಿರ್ವಹಿಸುತ್ತಿದ್ದರು. ಅವರ ಹತ್ಯೆ ಪ್ರಕರಣ ಪೊಲೀಸರಿಗೆ ಕಗ್ಗಂಟಾಗಿ ಪರಿಣಮಿಸಿತ್ತು.

ತನಿಖೆ ತೀವ್ರಗೊಳಿಸಿದ್ದ ಕೊಣಾಜೆ ಪೊಲೀಸರು ಕೃತ್ಯ ನಡೆದ ಎರಡು ತಿಂಗಳ ಬಳಿಕ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

Leave a Reply