

ಮೂಡುಬಿದಿರೆ ಪೊಲೀಸ್ ಠಾಣೆಗೆ ದೂರು ನೀಡಲು ಬಂದ ಮಹಿಳೆಯೊಬ್ಬರ ಪೋನ್ ನಂಬರ್ ನ್ನು ಪಡೆದು ಬಳಿಕ ಆಕೆಗೆ ಅಶ್ಲೀಲ ಕರೆ ಮತ್ತು ಸಂದೇಶ ಕಳುಹಿಸಿದ ಆರೋಪದ ಮೇಲೆ ಮೂಡುಬಿದಿರೆ ಪೊಲೀಸ್ ಠಾಣೆಯ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.
ಮೂಡುಬಿದಿರೆ ಬಳಿಯ ತೋಡಾರು ಮೂಲದ ವಿವಾಹಿತ ಮಹಿಳೆಯೊಬ್ಬರು ಆಗಸ್ಟ್ 23 ರಂದು ಕೌಟುಂಬಿಕ ಕಲಹದ ಕುರಿತು ದೂರು ನೀಡಲು ಠಾಣೆಗೆ ಭೇಟಿ ನೀಡಿದ್ದರು
. ಈ ವೇಳೆ ನಂತರ ಇನ್ಸ್ಪೆಕ್ಟರ್ ಸಂದೇಶ್ ಅವರು ಪತಿ ಮತ್ತು ಪತ್ನಿ ಇಬ್ಬರನ್ನೂ ಕರೆದು, ಅವರ ನಡುವೆ ಮಧ್ಯಸ್ಥಿಕೆ ವಹಿಸಿ ಪ್ರಕರಣವನ್ನು ಮುಕ್ತಾಯಗೊಳಿಸಿದ್ದರು. ಆದರೆ, ಪೊಲೀಸ್ ಸಿಬ್ಬಂದಿ ಶಾಂತಪ್ಪ ಎನ್ನುವವರು, ದೂರಿನಲ್ಲಿರುವ ಮಹಿಳೆಯ ಪೋನ್ ನಂಬರ್ ಪಡೆದು ಅವರಿಗೆ ಆಗಸ್ಟ್ 25 ರಿಂದ ಸೆಪ್ಟೆಂಬರ್ 1 ರವರೆಗೆ ನಿರಂತರ ಮೆಸೇಜ್ ಮತ್ತು ಕರೆ ಮಾಡಿ ಅಶ್ಲೀಲವಾಗಿ ಮಾತನಾಡಿ ಸಂದೇಶಗಳನ್ನು ಕಳುಹಿಸಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಮಹಿಳೆಯು ಸೆಪ್ಚೆಂಬರ್ 1ರಂದು ಸಂಜೆ ತನ್ನ ಸಹೋದರನೊಂದಿಗೆ ಮೂಡುಬಿದಿರೆ ಠಾಣೆಗೆ ಬಂದು ಸಿಬ್ಬಂದಿ ಶಾಂತಪ್ಪನ ವಿರುದ್ಧ ಕಾಲ್ ರೆಕಾರ್ಡ್ ಮತ್ತು ಕಾಲ್ ಲಿಸ್ಟ್ ಸಹಿತ ಸಾಕ್ಷಿ ಸಮೇತ ದೂರು ನೀಡಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ. ಅವರು ಮಂಗಳೂರು ಉತ್ತರ ಉಪವಿಭಾಗ ಪೊಲೀಸ್ ಉಪಾಯುಕ್ತರಾದ ಶ್ರೀಕಾಂತ್ ಅವರ ಅನುಮತಿ ಪಡೆದು ಪೊಲೀಸ್ ಸಿಬ್ಬಂದಿ ಶಾಂತಪ್ಪ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಸದ್ಯ ಆರೋಪಿ ಶಾಂತಪ್ಪನನ್ನು ಮಂಗಳೂರು ಪೊಲೀಸ್ ಆಯುಕ್ತ ಸುದೀರ್ ಕುಮಾರ್ ಅವರು ಅಮಾನತು ಮಾಡಿದ್ದು, ಮಂಗಳೂರು ಉತ್ತರ ಪೊಲೀಸ್ ಉಪವಿಭಾಗದ ಎಸಿಪಿ ಶ್ರೀಕಾಂತ್ ಅವರ ನೇತೃತ್ವದಲ್ಲಿ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.