

ಬಂಟ್ವಾಳ: ಮೂಲಭೂತ ಸೌಕರ್ಯಗಳ ಕೊರತೆಯಿಂದ ಕೊರಗುತ್ತಿರುವ ಬ್ರಹ್ಮರಕೂಟ್ಲು ಟೋಲ್ ಪ್ಲಾಜಾಕ್ಕೆ ಕಾಯಕಲ್ಪ ಒದಗಿಸಿ, ಇಲ್ಲವೇ ಬಂದ್ ಮಾಡಿ ಎಂಬುದಾಗಿ ಜನಾಕ್ರೋಶ ವ್ಯಕ್ತವಾಗಿದೆ.
ಟೋಲ್ ಪ್ಲಾಜಾದ ಬಳಿ ಹಾಗೂ ಸರ್ವೀಸ್ ರಸ್ತೆಯಲ್ಲಿ ಬೃಹತ್ ಗಾತ್ರದ ಗುಂಡಿಗಳು ನಿರ್ಮಾಣವಾಗಿದ್ದು,ಗುಂಡಿಗೆ ಬಿದ್ದ ವಾಹನಗಳು ಟೋಲ್ ನೀಡಿ ಬಳಿಕ ಗ್ಯಾರೇಜ್ ನತ್ತ ಮುಖ ಮಾಡಬೇಕಾದ ಸ್ಥಿತಿ ಇಲ್ಲಿದೆ. ಕತ್ತಲಲ್ಲಿ ಟೋಲ್ ಸಂಗ್ರಹ ಮಾಡುವ ರಾಜ್ಯದ ಪ್ರಥಮ ಟೋಲ್ ಸಂಗ್ರಹ ಕೇಂದ್ರವಾಗಿರಬಹುದು ಎಂಬುದು ಅತ್ಯಂತ ನೋವಿನ ಸಂಗತಿಯಾಗಿದೆ.
ಬೀದಿ ದೀಪವಿಲ್ಲದೆ ಸುತ್ತ ಕಗ್ಗತ್ತಲು ಆವರಿಸಿದೆ. ಟೋಲ್ ಸಂಗ್ರಹ ಮಾಡುವ ಕೇಂದ್ರದಲ್ಲಿ ಒಂದೋ ಎರಡೋ ಸಣ್ಣ ಚಿಮಿಣಿ ದೀಪಗಳು ಉರಿಯುತ್ತಿವೆ. ದೂರದಿಂದ ಬರುವ ವಾಹನಗಳಿಗೆ ಇಲ್ಲಿ ಟೋಲ್ ಬೂತ್ ಇದೆ ಎಂಬುದೇ ಗೊತ್ತಾಗುವುದಿಲ್ಲ. ದಾರಿ ದೀಪ ಅಳವಡಿಕೆಗೆ ವಿದ್ಯುತ್ ಕಂಬದ ಗುಂಡಿ ತೆಗೆದು ಹೋದ ಕೆಲಸಗಾರರು ಬಳಿಕ ಪತ್ತೆಯಿಲ್ಲ. ಕೇಂದ್ರದ ಸುತ್ತಲೂ ರಸ್ತೆ ಬದಿಯಲ್ಲಿ ಪೊದೆಗಳು, ಗಿಡಗಂಟಿಗಳು ತುಂಬಿದ್ದು,ರಸ್ತೆಯನ್ನು ಆಕ್ರಮಿಸಿವೆ. ಇದನ್ನೂ ಓದಿ: ಕಾಸರಗೋಡು: ಕ್ರೇನ್ ಮುರಿದುಬಿದ್ದು ಇಬ್ಬರು ಕಾರ್ಮಿಕರು ಸಾ*ವು ಪ್ರವಾಸಿಗರು ಮತ್ತು ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಗತ್ಯವಾಗಿ ಇರಬೇಕಾದ ಟಾಯ್ಲೆಟ್ ವ್ಯವಸ್ಥೆಯೂ ಇಲ್ಲ. ರಾಜಸ್ಥಾನ ಮೂಲದ ಕಂಪೆನಿಯೊಂದು ಟೋಲ್ ಪ್ಲಾಜಾ ನಡೆಸುತ್ತಿದ್ದು, ವರ್ಷಕ್ಕೆ 19 ಕೋಟಿ ರೂ. ಹಣವನ್ನು ಇಲಾಖೆಗೆ ಕಂಪೆನಿ ಪಾವತಿಸ ಬೇಕಾಗಿದೆ. ಅದಕ್ಕಾಗಿ ದಿನಕ್ಕೆ 5.50 ಲಕ್ಷ ರೂ. ಕಲೆಕ್ಷನ್ ಆಗಬೇಕು. ಆದರೆ ಈಗ ಹೆಚ್ಚು ಕಮ್ಮಿ 4 ರಿಂದ 5 ಲಕ್ಷ ರೂ. ವರೆಗೆ ಟೋಲ್ ಫೀ ಸಂಗ್ರಹವಾಗುತ್ತಿದ್ದು, ಕಂಪೆನಿ ನಷ್ಟದಲ್ಲಿದೆ ಎಂದು ಸಿಬಂದಿ ಮೂಲಗಳು ತಿಳಿಸಿವೆ. ಮಂಗಳೂರು ಬಳಿ ರಸ್ತೆಯಲ್ಲಿ ಅವಘಡ ಸಂಭವಿಸಿದ ಬಳಿಕ ಇಲ್ಲಿನ ಟೋಲ್ ಗೇಟ್ ಅವ್ಯವಸ್ಥೆ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಒಂದೋ ಹೆದ್ದಾರಿ ದುರಸ್ತಿ ಮಾಡಿ, ಇಲ್ಲವೇ ಟೋಲ್ ಪ್ಲಾಝಾ ಮುಚ್ಚಿ ಬಿಡಿ ಎಂಬುದಾಗಿ ಒತ್ತಾಯಿಸುತ್ತಿದ್ದಾರೆ.