

ಪೋಸ್ಟ್ ಕಾರ್ಡ್ ಸುದ್ದಿ ವಾಹಿನಿಯ ಸಂಸ್ಥಾಪಕರಾದ ಮಹೇಶ್ ವಿಕ್ರಂ ಹೆಗ್ಡೆ ಅವರನ್ನು ಬಂಧನ ಮಾಡಲಾಗಿದೆ. ಸಿಎಂ ಸಿದ್ದರಾಮಯ್ಯ ಫೋಟೋ ಬಳಸಿ, ಪ್ರಚೋದನಕಾರಿ ಪೋಸ್ಟ್ ಹಾಕಿದ್ದಕ್ಕೆ, ಮಹೇಶ್ ಅವರನ್ನು ಮೂಡಬಿದಿರೆ ಪೋಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ, ಬಂಧಿಸಿದ್ದಾರೆ.ಮೂಡಬಿದಿರೆ ಪಿಎಸ್‌ಐ ಕೃಷ್ಣಪ್ಪ ಎಂಬುವವರು ನೀಡಿದ ದೂರಿನ ಆಧಾರದ ಮೇಲೆ ಬಂಧಿಸಲಾಗಿದ್ದು, ಸೋಮವಾರದವರೆಗೆ ಕೋರ್ಟ್ ನ್ಯಾಯಾಂಗ ಬಂಧನ ವಿಸ್ತರಿಸಿದೆ.
ಮಹೇಶ್ ಅವರು ಸಿಎಂ ಸಿದ್ದರಾಮಯ್ಯ ಅವರ ಫೋಟೋ ಹಾಕಿ ಎಡಿಟ್ ಮಾಡಿ, ಮಾನ್ಯ ಮುಖ್ಯಮಂತ್ರಿಗಳೇ 1 ಬಾರಿ ಗಣಪನ ಮೆರವಣಿಗೆ ಮೇಲೆ ಕಲ್ಲು ತೂರಾಟ ಮಾಡಿದವರ ಮಸೀದಿ ಮೇಲೆ ಬುಲ್ಡೋಜರ್ ನುಗ್ಗಿಸುವ ಸಾಹಸ ಮಾಡಿ. ಮುಂದಿನ ವರ್ಷ ರಾಜ್ಯದ ಯಾವ ಮೂಲೆಯಲ್ಲೂ ಇಂಥ ಕೃತ್ಯವಾಾಗುವುದಿಲ್ಲ ಎಂದು ಬರೆದಿದ್ದರು. ಹೀಗಾಗಿ ಕೋಮುಪ್ರಚೋದನೆ ಪೋಸ್ಟ್ ಅಡಿ ಅವರ ವಿರುದ್ಧ ದೂರು ದಾಖಲಿಸಿ, ಬಂಧಿಸಲಾಗಿದೆ.ಇನ್ನು ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಬರೆದಿರುವ ಬಿಜೆಪಿ ಉಚ್ಛಾಟಿತ ನಾಯಕ ಬಸವನಗೌಡ ಪಾಟೀಲ್ ಯತ್ನಾಳ್, ಪೋಸ್ಟ್ ಕಾರ್ಡ್ ಸುದ್ದಿ ವಾಹಿನಿಯ ಸಂಸ್ಥಾಪಕರು ಹಾಗೂ ಕರಾವಳಿಯ ಹಿಂದುತ್ವದ ಧ್ವನಿ ಮಹೇಶ್ ವಿಕ್ರಂ ಹೆಗ್ಡೆ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಗೊತ್ತಾಗಿದೆ. ಪ್ರಖರ ಹಿಂದುತ್ವವಾದಿಗಳನ್ನು ಹೆಡೆಮುರಿಕಟ್ಟಲು ಸರ್ಕಾರ ಯಾವುದೇ ಕಾರಣಗಳಿಲ್ಲದೆ ಬಂಧಿಸುತ್ತಿರುವುದು ಪ್ರಜಾಪ್ರಭುತ್ವದ ಅಣಕ ಎಂದರೆ ತಪ್ಪಾಗಲಾರದು ಎಂದಿದ್ದಾರೆ.








