

ಬೆಳ್ತಂಗಡಿ : ಬಿಜೆಪಿಯ ಕೋಮುವಾದ, ಭ್ರಷ್ಟಾಚಾರ ಹಾಗೂ ಕಾಂಗ್ರೆಸ್ ನ ಹಗಲು ಜಾತ್ಯತೀತ ರಾತ್ರಿ ಕೋಮುವಾದ ನಿಲುವು ಮತ್ತು ನ್ಯಾಯ ನಿರಾಕರಣೆಗಳಿಂದ ಬೇಸತ್ತು ನಮ್ಮ ಪಕ್ಷದತ್ತ ಒಲವು ತೋರಿಸಿ ತಂಡೋಪತಂಡವಾಗಿ ಯುವಕರು, ಹಿರಿಯರು, ಮಹಿಳೆಯರು ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿರುವಾಗ ಪಕ್ಷದ ನಾಯಕರಾದ ನಮಗೆ ಜವಾಬ್ದಾರಿಗಳು ಕೂಡ ದುಪ್ಪಟ್ಟಾಗಿದೆ. ಒಂದು ಐತಿಹಾಸಿಕ ಬದಲಾವಣೆಗಾಗಿ ನಾವು ನಮ್ಮ ಪಕ್ಷದ ಕೆಲಸ ಕಾರ್ಯಗಳಿಗೆ ಮತ್ತಷ್ಟು ವೇಗವನ್ನು ಹೆಚ್ಚಿಸಬೇಕಾಗಿದೆ. ನಮ್ಮ ಅತ್ಯಮೂಲ್ಯ ಸಮಯವನ್ನು ಕೊಡುಗೆಯ ರೂಪದಲ್ಲಿ ಈ ಪಕ್ಷಕ್ಕಾಗಿ ನೀಡಬೇಕಾಗಿದೆ ಎಂದು “ಬದಲಾವಣೆಗಾಗಿ ಕೊಡುಗೆ” ಎಂಬ ಘೋಷ ವಾಕ್ಯದೊಂದಿಗೆ ಗುರುವಾಯನಕೆರೆ ಶಾದಿ ಮಹಲ್ ನಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ ಹಮ್ಮಿಕೊಂಡ ‘ಎಸ್‌ಡಿಪಿಐ ನಾಯಕರ ಸಭೆ’ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ರಾಜ್ಯ ಕಾರ್ಯದರ್ಶಿ ರಿಯಾಝ್ ಕಡಂಬು ಅಭಿಪ್ರಾಯಪಟ್ಟರು.

ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಅಶ್ರಫ್ ತಲಪಾಡಿ ರವರು ಮಾತನಾಡಿ, ಈ ದೇಶದ ಫ್ಯಾಸಿಸ್ಟ್ ಸರಕಾರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ. ಫೈಝಿಯವರನ್ನು ಅನ್ಯಾಯವಾಗಿ ಬಂಧಿಸಿಟ್ಟಿದೆ. ಪಕ್ಷದ ಕಛೇರಿಗಳಿಗೆ ಈಡಿ ದಾಳಿ ಮಾಡಿ, ನಾಯಕರ ಮೇಲೆ ಸುಳ್ಳು ಕೇಸು ದಾಖಲಿಸಿಕೊಂಡು ಬೆದರಿಸಲಾಗುತ್ತಿದೆ. ನಾವು ಇಂತಹ ಯಾವ ಬೆದರಿಕೆಗೂ ಜಗ್ಗದೇ ನ್ಯಾಯಕ್ಕಾಗಿ ನಡೆಸುವ ಹೋರಾಟಗಳನ್ನು ಇನ್ನಷ್ಟು ಶಕ್ತಿಯುತವಾಗಿ ನಡೆಸಬೇಕಾಗಿದೆ ಹಾಗೂ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಮ್ಮ ಪಕ್ಷದ ಎಲ್ಲಾ ಅಭ್ಯರ್ಥಿಗಳನ್ನು ಗೆಲ್ಲಿಸಲೇಬೇಕು ಎಂಬ ಪಣ ತೊಟ್ಟು ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರಾಧ್ಯಕ್ಷ ಅಕ್ಬರ್ ಬೆಳ್ತಂಗಡಿ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ನವಾಝ್ ಕಟ್ಟೆ ಪ್ರಾಸ್ತವಿಕ ಮಾತನಾಡಿದರು.
ವೇದಿಕೆಯಲ್ಲಿ ಜಿಲ್ಲಾ ಸಮಿತಿ ಸದಸ್ಯರಾದ ಹನೀಫ್ ಪುಂಜಾಲಕಟ್ಟೆ, ಕ್ಷೇತ್ರ ಸಮಿತಿ ಉಪಾಧ್ಯಕ್ಷರಾದ ನಿಸಾರ್ ಕುದ್ರಡ್ಕ, ಜೊತೆ ಕಾರ್ಯದರ್ಶಿ ರಶೀದ್ ಬೆಳ್ತಂಗಡಿ, ಕೋಶಾಧಿಕಾರಿ ಸ್ವಾಲಿ ಮದ್ದಡ್ಕ ಉಪಸ್ಥಿತರಿದ್ದರು.
ಕ್ಷೇತ್ರ ಸಮಿತಿ ಸದಸ್ಯರಾದ ಸಲೀಂ ಗುರುವಾಯನಕೆರೆ ಕಾರ್ಯಕ್ರಮವನ್ನು ನಿರೂಪಿಸಿ, ಕ್ಷೇತ್ರ ಸಮಿತಿ ಕಾರ್ಯದರ್ಶಿ ಅಶ್ಫಾಕ್ ಪುಂಜಾಲಕಟ್ಟೆ ಧನ್ಯವಾದಗೈದರು.