

ವಿಜಯಪುರ: ಕರ್ನಾಟಕದಲ್ಲಿ ಬ್ಯಾಂಕ್ ದರೋಡೆ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಮಂಗಳೂರಿನಲ್ಲಿ ಕೋಟೆಕಾರ್ ಬ್ಯಾಂಕ್ ನಲ್ಲಿ ದರೋಡೆ ಪ್ರಕರಣ ಬಳಿಕ ಮನಗೂಳಿ ಕೆನರಾ ಬ್ಯಾಂಕ್ ಕಳ್ಳತನ ಪ್ರಕರಣ ಮಾಸುವ ಮುನ್ನವೇ ಇದೀಗ ಎಸ್ ಬಿಐ ಬ್ಯಾಂಕ್ ಗೆ ನುಗ್ಗಿದ ದರೋಡೆಕೊರರು ಸುಮಾರು 1 ಕೋಟಿ ನಗದು ಸೇರಿದಂತೆ 12 ಕೆಜಿ ಚಿನ್ನ ದರೋಡೆ ಮಾಡಿದ್ದಾರೆ ಎಂದು ವರದಿಯಾಗಿದೆ.
ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಚಡಚಣ ಪಟ್ಟಣದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್‌ನಲ್ಲಿ ದರೋಡೆ ನಡೆದಿದೆ.
ಸಿನಿಮೀಯ ರೀತಿಯಲ್ಲಿ ಬ್ಯಾಂಕ್ ಸಿಬ್ಬಂದಿಗೆ ಪಿಸ್ತೂಲ್, ಮಾರಕಾಸ್ತ್ರಗಳನ್ನು ತೋರಿಸಿ ಕಟ್ಟಿಹಾಕಿ ಕಳ್ಳರು ಕಳ್ಳತನ ಮಾಡಿದ್ದಾರೆ. ಬ್ಯಾಂಕ್ ವಹಿವಾಟು ಸಮಯ ಮುಗಿದ ಮೇಲೆ ಬ್ಯಾಂಕ್‌ಗೆ 5ಕ್ಕೂ ಹೆಚ್ಚು ಮುಸುಕುಧಾರಿಗಳು ನುಗ್ಗಿ ಕೃತ್ಯ ಎಸಗಿದ್ದಾರೆ. ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಬ್ಯಾಂಕ್‌ನಲ್ಲಿ ಎಷ್ಟು ಹಣ ಕಳ್ಳತನದ ಆಗಿದೆ ಎಂಬುದರ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ. ಅಂದಾಜು 1 ಕೋಟಿ ರೂ. ನಗದು ಹಣ ಹಾಗೂ ಸುಮಾರು 12 ಕೆಜಿಗೂ ಆಧಿಕ ಚಿನ್ನಾಭರಣ ದರೋಡೆಯಾಗಿರೋ ಶಂಕೆ ವ್ಯಕ್ತವಾಗಿದೆ.
ಬ್ಯಾಂಕ್ ಸೆಕ್ಯುರಿಟಿ ಮೂರು ತಿಂಗಳಿಂದ ರಜೆಯಲ್ಲಿದ್ದಾರೆ. ಬ್ಯಾಂಕ್ ಪಕ್ಕದಲ್ಲೇ ಇರುವ ಎಟಿಎಂ ಸೆಕ್ಯುರಿಟಿಯನ್ನು ಕೂಡ ಒಳಗಡೆ ಲಾಕ್ ಮಾಡಿದ್ದರು. ಐದು ಜನ ದರೋಡೆಕೋರರು ಬಂದಿದ್ದರು. ಇಬ್ಬರು ಬ್ಯಾಂಕ್ ಹೊರಗಡೆ ನಿಂತರೆ, ಮೂವರು ಬ್ಯಾಂಕ್ ಒಳಗಡೆ ಹೋಗಿ ದರೋಡೆ ಮಾಡಿದ್ದಾರೆ. ಬ್ಯಾಂಕ್‌ಗೆ ಎಂಟ್ರಿ ಕೊಡ್ತಿದ್ದಂತೆ ಮೊದಲು ಪಿಸ್ತೂಲ್ ತೋರಿಸಿ ಬೆದರಿಸಿದ್ದಾರೆ. ನಂತರ ಬ್ಯಾಂಕ್‌ನ ಎಲ್ಲ ಸಿಬ್ಬಂದಿ ಹಾಗೂ ಎಟಿಎಂ ಸೆಕ್ಯುರಿಟಿಯನ್ನ ಒಂದು ಕೋಣೆಯಲ್ಲಿ ಕೂಡ ಹಾಕಿ, ಕೈ-ಕಾಲು ಕಟ್ಟಿ ದರೋಡೆ ಮಾಡಿದ್ದಾರೆ. ಹುಲ್ಲಜಂತಿ ಗ್ರಾಮದಲ್ಲಿ ವಾಹನ ಬಿಟ್ಟು ಪರಾರಿಯಾಗಿದ್ದಾರೆ. ಇದಕ್ಕೂ ಮುನ್ನ ಬ್ಯಾಂಕ್‌ಗೆ ಮೂರು ದಿನದಿಂದ ಭೇಟಿ ಕೊಟ್ಟಿದ್ದರು. ಆಗ ಮುಖಕ್ಕೆ ಮಾಸ್ಕ್ ಕಟ್ಟಿಕೊಂಡೆ ಬ್ಯಾಂಕ್‌ಗೆ ಎಂಟ್ರಿ ಕೊಟ್ಟಿದ್ದರು. ಮೂರು ದಿನಗಳಿಂದ ಬ್ಯಾಂಕ್ ಸಿಬ್ಬಂದಿ ಚಲನವಲನದ ಮೇಲೆ ಕಣ್ಣಿಟ್ಟಿದ್ದರು. ಈ ಮುಸುಕುಧಾರಿ ದರೋಡೆಕೋರರನ್ನು ಎಟಿಎಂ ಸೆಕ್ಯುರಿಟಿ ಗುರುತಿಸಿದ್ದಾರೆ.
ಪೊಲೀಸರು ಬ್ಯಾಂಕಿನ ಸಿಸಿ ಕ್ಯಾಮೆರಾ ಮತ್ತು ಹಾರ್ಡ್ ಡಿಸ್ಕ್ ವಶಕ್ಕೆ ಪಡೆದಿದ್ದಾರೆ. ಮಹಾರಾಷ್ಟ್ರ ಸಂಪರ್ಕಿಸುವ ಹಾಗೂ ಚಡಚಣದ ಇತರೇ ರಸ್ತೆಗಳಿಗೂ ಪೊಲೀಸರು ನಾಕಾ ಬಂದಿ ಹಾಕಿ ಕಳ್ಳರ ಬಂಧನಕ್ಕೆ ಬಲೆ ಬೀಸಿದ್ದಾರೆ.