

ಪುತ್ತೂರು: ರಾಜ್ಯ ಸರ್ಕಾರದ ಯೋಜನೆಯಡಿ ಕೊಳವೆ ಬಾವಿ ಮಂಜೂರಿಗೆ ಲಂಚ ಆರೋಪದಲ್ಲಿ ಲೋಕಾಯುಕ್ತ ಪೊಲೀಸರಿಂದ ಬಂಧನಗೊಂಡು ಜೈಲು ಸೇರಿದ್ದ ಪೆರುವಾಯಿ ಗ್ರಾಮ ಪಂಚಾಯತ್ ಅಧ್ಯಕ್ಷೆ ನಫೀಸಾ ಮತ್ತು ಬಿಲ್ ಕಲೆಕ್ಟರ್ ವಿಲಿಯಂ ಅವರಿಗೆ ಸೆಪ್ಟೆಂಬರ್ 20ರಂದು ಮಂಗಳೂರು ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಪ್ರಕರಣದ ಹಿನ್ನೆಲೆ:ಬಂಟ್ವಾಳ ತಾಲೂಕಿನ ಪೆರುವಾಯಿ ಗ್ರಾಮದಲ್ಲಿ 1 ಎಕರೆ ಕೃಷಿ ಜಮೀನು ಹೊಂದಿರುವ ಕೃಷಕನಿಗೆ ನೀರಿನ ಸಮಸ್ಯೆ ಎದುರಾಗಿತ್ತು. ಈ ಕಾರಣದಿಂದ ಅವರು 2024ರಲ್ಲಿ ಪೆರುವಾಯಿ ಗ್ರಾಮ ಪಂಚಾಯತ್ ಕಚೇರಿಗೆ ಅರ್ಜಿ ಸಲ್ಲಿಸಿ, ಸರ್ಕಾರದ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ತಮ್ಮ ಜಾಗಕ್ಕೆ ಕೊಳವೆ ಬಾವಿ ಕೊರೆಯುವಂತೆ ಮನವಿ ಮಾಡಿದ್ದರು. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಸಲ್ಲಿಸಿದ್ದ ಈ ಅರ್ಜಿಯನ್ನು ಪಂಚಾಯತ್ ಸತಾಯಿಸಿದರೂ, ಕೊಳವೆ ಬಾವಿ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗಿರಲಿಲ್ಲ.
2025ರಲ್ಲಿ ಸರ್ಕಾರಿ ಯೋಜನೆಯಡಿ ಕೃಷಕರಿಗೆ ಕೊಳವೆ ಬಾವಿ ಸೌಲಭ್ಯ ನೀಡಲಾಗುತ್ತಿರುವುದು ತಿಳಿದುಬಂದಾಗ, ಮೇ ತಿಂಗಳಲ್ಲಿ ಮತ್ತೊಮ್ಮೆ ಅರ್ಜಿ ಸಲ್ಲಿಸಿದ್ದರು. ಅರ್ಜಿದಾರರ ಪತ್ನಿ ಎರಡು-ಮೂರು ಬಾರಿ ಪಂಚಾಯತ್ ಕಚೇರಿಗೆ ಹೋಗಿ ವಿಚಾರಿಸಿದರೂ ಯಾವುದೇ ಸ್ಪಷ್ಟ ಪ್ರತಿಕ್ರಿಯೆ ದೊರೆತಿಲ್ಲ. ಅರ್ಜಿದಾರರ 75 ವರ್ಷದ ಮಾವನಿಗೆ ಆರೋಗ್ಯ ಸಮಸ್ಯೆ ಇದ್ದ ಕಾರಣ, ಅವರನ್ನು ಕರೆದುಕೊಂಡು ಪಂಚಾಯತ್‌ಗೆ ಹೋಗಿ ವಿಚಾರಿಸಲು ಸೂಚಿಸಿದ್ದರು.
ಅದರಂತೆ, ಸೆಪ್ಟೆಂಬರ್ 2ರಂದು ಅರ್ಜಿದಾರು ಪಂಚಾಯತ್ ಕಚೇರಿಗೆ ತೆರಳಿ, ಅಧ್ಯಕ್ಷೆ ನಫೀಸಾ ಅವರನ್ನು ಸಂಪರ್ಕಿಸಿ ಮಾವನ ಹೆಸರಿಗೆ ಕೊಳವೆ ಬಾವಿ ಮಂಜೂರಾಗಿದೆಯೇ ಎಂದು ಕೇಳಿದಾಗ, “ನಿಮಗೆ ಬೋರ್‌ವೆಲ್ ಫ್ರೀ ಆಗುತ್ತದೆ. ಬೆಂಗಳೂರು ಆಫೀಸ್‌ಗೆ ಹತ್ತು ಸಾವಿರ ರೂಪಾಯಿ ಕೊಡಬೇಕು. ಹಣ ಕೊಟ್ಟರೆ ಪಾಸ್ ಮಾಡಿಸುತ್ತಾರೆ. ನಾನೇ ಬೆಂಗಳೂರಿಗೆ ಹೋಗಿ ನಿಮ್ಮ ಕೆಲಸ ಮಾಡಿಸುತ್ತೇನೆ” ಎಂದು ನಫೀಸಾ ಹೇಳಿದ್ದರು. ಹಣ ಕೊಟ್ಟರೆ ಮಾತ್ರ ಕೆಲಸ ಮುಗಿಯುತ್ತದೆ ಎಂದು ಒತ್ತಿ ಹೇಳಿದ್ದರು.
ಅರ್ಜಿದಾರು ತನ್ನ ಬಳಿ ಅಷ್ಟು ಹಣ ಇಲ್ಲ ಎಂದು ಹೇಳಿ ವಾಪಸ್ ಬಂದಿದ್ದರು. ಆದರೆ, ಸೆಪ್ಟೆಂಬರ್ 4ರಂದು ಮತ್ತೆ ಪಂಚಾಯತ್‌ಗೆ ತೆರಳಿ ಬೋರ್‌ವೆಲ್ ಹಾಕಿಸುವಂತೆ ಕೇಳಿದಾಗ, ನಫೀಸಾ ಮತ್ತೆ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ಕೆಲಸ ಮಾಡಿಸಲು ₹10,000 ಲಂಚ ಬೇಡಿಕೆ ಇಟ್ಟಿದ್ದರು. ಈ ಆರೋಪದ ಮೇರೆಗೆ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸೆಪ್ಟೆಂಬರ್ 6ರಂದು ನಫೀಸಾ, ಬಿಲ್ ಕಲೆಕ್ಟರ್ ವಿಲಿಯಂ ಅವರಿಗೆ ಅರ್ಜಿದಾರರಿಂದ ₹10,000 ಲಂಚ ಹಣ ಪಡೆಯುವಂತೆ ಸೂಚಿಸಿದ್ದರು. ಈ ವೇಳೆ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದರು. ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ನಫೀಸಾ ಮತ್ತು ಬಿಲ್ ಕಲೆಕ್ಟರ್ ವಿಲಿಯಂ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಇದೀಗ ಅವರು ಜಾಮೀನು ಪಡೆದುಕೊಂಡಿದ್ದಾರೆ.