

ಬೆಂಗಳೂರು : ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರ ರಾಜ್ಯದಾದ್ಯಂತ ಜನರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿಗಳ ಕುರಿತು ಸಮೀಕ್ಷೆಯನ್ನು ಆರಂಭಿಸಿದೆ. 2025ನೇ ಸಾಲಿನ ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7ರವರೆಗೆ ರಾಜ್ಯದ ಮೂಲೆ ಮೂಲೆಗೆ ಗಣತಿದಾರರು ಭೇಟಿ ನೀಡಿ ಸಮೀಕ್ಷೆ ನಡೆಸಲಿದ್ದಾರೆ.
ರಾಜ್ಯದ ಜನತೆಯ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಪರಿಸ್ಥಿತಿ ಕುರಿತು ಮಾಹಿತಿ ಸಂಗ್ರಹಿಸಲಿರುವ ಈ ಸಮೀಕ್ಷೆಯು ಅತ್ಯಂತ ಮಹತ್ವದ್ದಾಗಿದೆ. ಸಮಾಜದ ಎಲ್ಲಾ ವರ್ಗಗಳ ಶ್ರೇಯೋಭಿವೃದ್ಧಿಗಾಗಿ ಭವಿಷ್ಯದಲ್ಲಿ ಕೈಗೊಳ್ಳಲಿರುವ ಕಾರ್ಯಕ್ರಮಗಳ ಕುರಿತು ನಿರ್ಧಾರ ಕೈಗೊಳ್ಳಲು ಸಹಕಾರಿಯಾಗಲಿದೆ.
ಕರ್ನಾಟಕದಲ್ಲಿ ಮುಸ್ಲಿಮರು ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಇತರ ಸಮುದಾಯಗಳ ಪೈಕಿ ಅತ್ಯಂತ ಹಿಂದುಳಿದಿರುವುದು ಸತ್ಯ. ಈ ಮೂರು ಕ್ಷೇತ್ರಗಳಲ್ಲಿ ಮುಸ್ಲಿಮರನ್ನು ಮುಂದೆ ತರಲು ರಾಜ್ಯ ಸರ್ಕಾರದ ವತಿಯಿಂದ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಯೋಜನೆಗಳನ್ನು ರೂಪಿಸಲು, ಶಿಕ್ಷಣ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚಿನ ಅವಕಾಶಗಳು ಕಲ್ಪಿಸಬೇಕಿದೆ.
ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ನಾವು ಭಾಗವಹಿಸಿ ನಮ್ಮ ಪರಿಸ್ಥಿತಿಯನ್ನು ಸರ್ಕಾರದ ಮುಂದೆ ಇರಿಸಿದರೆ, ಸರ್ಕಾರದಿಂದ ಈಗ ನಮ್ಮ ಕಲ್ಯಾಣಕ್ಕಾಗಿ ಮಾಡುತ್ತಿರುವ ಕಾರ್ಯಕ್ರಮಗಳು, ಯೋಜನೆಗಳಲ್ಲಿ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆಗಳಿವೆ. ಅಲ್ಲದೇ, ಸರ್ಕಾರದ ನೀತಿ ನಿರೂಪಣೆಯಲ್ಲಿ ನಮ್ಮ ಪಾಲುದಾರಿಕೆಯೂ ಹೆಚ್ಚಾಗುತ್ತದೆ.
ದಯವಿಟ್ಟು ನೆನಪಿಡಿ, ನಾವು ನಮ್ಮ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಪರಿಸ್ಥಿತಿಯ ಬಗ್ಗೆ ಸರ್ಕಾರದ ಗಮನ ಸೆಳೆಯದೆ ನಿರ್ಲಕ್ಷ್ಯ ತೋರಿಸಿದರೆ ಮುಂದಿನ ದಿನಗಳಲ್ಲಿ ಸರ್ಕಾರ ನಮ್ಮ ಕಲ್ಯಾಣಕ್ಕಾಗಿ ಏನು ಮಾಡುತ್ತಿಲ್ಲ ಎಂದು ದೂಷಿಸಿಕೊಂಡು ಕೂತರೆ ಏನು ಪ್ರಯೋಜನವಿಲ್ಲ. ನಮಗೆ ಆಗುವ ನಷ್ಟಕ್ಕೆ ನಾವೇ ಜವಾಬ್ದಾರರಾಗುತ್ತೇವೆ.
ಆದುದರಿಂದ, ನಿಮ್ಮೆಲ್ಲರಲ್ಲೂ ನನ್ನ ಕಳಕಳಿಯ ಮನವಿ ಏನೆಂದರೆ ಗಣತಿದಾರರು ನಿಮ್ಮ ಮನೆ ಬಳಿ ಬಂದಾಗ ಅವರು ಕೇಳುವಂತಹ ಎಲ್ಲಾ 60 ಪ್ರಶ್ನೆಗಳಿಗೂ ಸಮಾಧಾನದಿಂದ ಸ್ಪಷ್ಟವಾಗಿ ಉತ್ತರ ನೀಡಿ. ಈ ಬಗ್ಗೆ ನಿಮಗೆ ಏನಾದರೂ ಅನುಮಾನಗಳಿದ್ದರೆ, ಮಾರ್ಗದರ್ಶನದ ಅಗತ್ಯವಿದ್ದರೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಬರುವ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗವು ಸ್ಥಾಪನೆ ಮಾಡಿರುವ ಈ ಕೆಳಕಂಡ ಸಹಾಯವಾಣಿಗಳನ್ನು ಸಂಪರ್ಕಿಸಿ.
ಪ್ರಕಟಣೆ: ಬಿ.ಜೆಡ್. ಜಮೀರ್ ಅಹ್ಮದ್ ಖಾನ್, ಸಚಿವರು, ವಸತಿ, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಸ್ ಇಲಾಖೆ, ಕರ್ನಾಟಕ ಸರ್ಕಾರ
ಸಹಾಯವಾಣಿ: ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ 080-69146723 | ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ 8050770004






