October 12, 2025
WhatsApp Image 2025-10-02 at 9.01.46 PM

ವರದಿ : ಧನುಷ್ ಕುಲಾಲ್ ಶಕ್ತಿನಗರ

ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ನಡೆದ ಮಂಗಳೂರು ದಸರಾ ಮಹೋತ್ಸವದ ವೈಭವದ ಶೋಭಾಯಾತ್ರೆಯು ಸಹಸ್ರಾರು ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಗುರುವಾರ ನಡೆಯಿತು. ಕ್ಷೇತ್ರದಲ್ಲಿ ನವರಾತ್ರಿ ಅಂಗವಾಗಿ ಪೂಜಿಸಲ್ಪಟ್ಟ ಶ್ರೀ ಮಹಾಗಣಪತಿ, ಆದಿಶಕ್ತಿ, ನವದುರ್ಗೆಯರು, ಶ್ರೀ ಶಾರದಾ ಮಾತೆ, ಬ್ರಹ್ಮ ಶ್ರೀ ನಾರಾಯಣ ಗುರುಗಳ ವಿಗ್ರಹ ಸಹಿತ ವರ್ಣರಂಜಿತ ಮೆರವಣಿಗೆ ನಡೆಯಿತು.

ಕ್ಷೇತ್ರದಲ್ಲಿ ೧೦ ದಿನ ಪೂಜೆಗೊಂಡ ಮೂರ್ತಿಗಳನ್ನು ವಿಸರ್ಜನಾ ಶೋಭಾಯಾತ್ರೆ ಸಲುವಾಗಿ ದರ್ಬಾರ್ ಮಂಟಪದಿಂದ ಹೊರಗೆ ತರುವ ಸಂಧರ್ಭದಲ್ಲೇ ದೇವಸ್ಥಾನದ ಪ್ರಾಂಗಣ ಜನರು ಕಿಕ್ಕಿರಿದು ನೆರೆದಿದ್ದರು. ಮುಸ್ಸಂಜೆ ಹೊತ್ತಿನಲ್ಲಿ ಸರ್ವಾಲಂಕೃತೆ ಶಾರದೆಯ ಮೂರ್ತಿಯನ್ನು ಕಂಡು ಭಕ್ತರು ಪುನೀತರಾದರು. ಆರಂಭದಲ್ಲಿ ಅಲಂಕೃತ ಕೊಡೆಗಳು, ಬ್ಯಾಂಡ್‌, ಚೆಂಡೆ, ನಾಸಿಕ್‌ ತಂಡಗಳು, ವೇಷಭೂಷಣಗಳು, ನಾನಾ ರಾಜ್ಯ-ಜಿಲ್ಲೆಯ ಕಲಾ ತಂಡಗಳು, ಜಾನಪದ ಕಲಾ ತಂಡಗಳು, ಭಜನಾ ತಂಡ, ವಾದ್ಯ-ಬ್ಯಾಂಡ್ ತಂಡಗಳು ದಸರಾ ಮೆರವಣಿಗೆಯಲ್ಲಿ ಮೆರುಗು ನೀಡಿ, ಗಮನ ಸೆಳೆಯಿತು. ವಿದ್ಯುದ್ದೀಪಗಳಿಂದ ಅಲಂಕೃತಗೊಂಡ ಮಂಟಪದಲ್ಲಿ ವಿರಾಜಮಾನವಾಗಿದ್ದ ನಾರಾಯಣಗುರು, ಗಣಪತಿ, ಆದಿಶಕ್ತಿ, ನವದುರ್ಗೆಯರು ಹಾಗೂ ಶ್ರೀ ಶಾರದೆಯ ಮನಮೊಹಕ ಮೂರ್ತಿಗಳು ನಗರದ ಪ್ರಮುಖ ಬೀದಿಗಳಲ್ಲಿ ರಾತ್ರಿ ಹೊತ್ತಿನಲ್ಲಿ ಸಾಲಾಗಿ ಸಾಗಿಬರುತ್ತಿದ್ದ ದೃಶ್ಯಗಳನ್ನು ಕಣ್ತುಂಬಿಕೊಂಡ ಭಕ್ತರು ಮೂಕವಿಸ್ಮಿತರಾದರು. ಪ್ರತಿಯೊಂದು ದೇವರ ಟ್ಯಾಬ್ಲೊ ಮುಂಭಾಗ ಬ್ಯಾಂಡ್, ಸ್ಯಾಕ್ರೋಫೋನ್, ವಾದ್ಯ ತಂಡಗಳು ಭಾಗವಹಿಸಿದ್ದವು. ನಗಾರಿ, ಗೊಂಡ ಡಕ್ಕೆ, ಕೊಂಬು, ಕಹಳೆ, ಡೊಳ್ಳು ಕುಣಿತ, ಕಂಗೀಲು, ತಮಟೆ, ವೀರಗಾಸೆ, ಹಗಲು ವೇಷ, ಕುರುಬರ ಡೊಳ್ಳು, ನಂದಿಧ್ವಜ ಕುಣಿತ, ಕರಡಿಮಜಲು, ಭಜನೆ ಕುಣಿತ, ಹಲಗಿ ಮಜಲು, ಕಂಸಾಳೆ, ಪಟಾಕುಣಿತ, ಗೊರವರ ಕುಣಿತ, ಪುರವಂತಿಕೆ, ಹಗಲುವೇಷ, ಜಗ್ಗಲಿಗೆ, ಡೊಳ್ಳುಕುಣಿತ, ವೀರಗಾಸೆ, ಲಂಬಾಣಿ ನೃತ್ಯ, ಸೋಮನ ಕುಣಿತ, ಝಂಜ್‌ಮೇಳ, ಕಂಗೀಲು ಸೇರಿದಂತೆ 23 ಜಿಲ್ಲೆಗಳ ಕಲಾ ತಂಡಗಳು ಮೆರವಣಿಗೆಗೆ ಶೋಭೆ ನೀಡಿತು.

ಮಂಗಳೂರು ದಸರಾ ಶೋಭಾಯಾತ್ರೆಯ ಚೆಲುವನ್ನು ವೈವಿಧ್ಯಮಯ ಟ್ಯಾಬ್ಲೊಗಳು ಮತ್ತಷ್ಟು ಹೆಚ್ಚಿಸಿದವು. ಶಾರದೆ ಟ್ಯಾಬ್ಲೊದ ಬಳಿಕ ಶೋಭಾಯಾತ್ರೆಯ ಮೊದಲ ಮರ್ಯಾದೆಯ ಮಂಜಲ್ ಬೈಲ್ ಫ್ರೆಂಡ್ಸ್ ತಂಡವು ೭೫ನೇ ವರ್ಷದ ಸಂಭ್ರಮದಲ್ಲಿದ್ದು, ಹುಲಿವೇಷ ಮತ್ತು ಸಾಮಾಜಿಕ ಕಳಕಳಿ, ಸ್ವಾವಲಂಬನೆ ಹಾಗೂ ಸ್ವಚ್ಛತೆ ಕುರಿತ ವಿಶೇಷ ಸ್ಥಬ್ದಚಿತ್ರದೊಂದಿಗೆ ಭಾಗವಹಿಸಿತು. 2ನೇ ಮರ್ಯಾದೆಯ ಕಾಳಿಚರಣ್ ತಂಡವು ಹುಲಿವೇಷ ಸಹಿತ ಶಾರದಾ ವೇಷದ ವಿಶಿಷ್ಟ ಟ್ಯಾಬ್ಲೋ, ಮೂರನೇ ಮರ್ಯಾದೆಯ ಬರ್ಕೆ ಫ್ರೆಂಡ್ಸ್ ತಂಡದ ಹುಲಿವೇಷ ಹಾಗೂ ’ಕಂಗ್ವ’ ಸಿನಿಮಾದ ದೃಶ್ಯ ರೂಪಕದ ಟಾಬ್ಲೋ ಸಾಗಿತು. ಶಿವ ಫ್ರೆಂಡ್ಸ್ ತಂಡದ ದೇವಿಯ ಹಿನ್ನಲೆಯ ವಿಶೇಷ ದೃಶ್ಯ ರೂಪಕ, ಗ್ರೀನ್ ಪಾರ್ಕ್ ಫ್ರೆಂಡ್ಸ್ ತಂಡದಿಂದ ಹುಲಿ, ಜೂನಿಯರ್ ಬಾಯ್ಸ್ ತಂಡದಿಂದ ’ಗುಬ್ಬಿ ಕುಣಿತ’ ವಿಶೇಷ ನೃತ್ಯ ರೂಪಕದ ಸ್ಥಬ್ದಚಿತ್ರ, ಬಲ್ಲಾಳ್ ಭಾಗ್ ಫ್ರೆಂಡ್ಸ್ ನಿಂದ ಹುಲಿ ಹಾಗೂ ಮೂಸಿಕಲ್ ಫ್ಯೂಶನ್ ಟಾಬ್ಲೋ, ಸತ್ಯಸಾರಮಾನಿ ತಂಡದಿಂದ ಹುಲಿ, ಯುವ ಸಂಗಮ್ ತಂಡದಿಂದ ಹುಲಿಯೊಂದಿಗೆ ಮಕ್ಕಳ ಶಾರದಾ ಟಾಬ್ಲೋ ರಾರಾಜಿಸಿತು. ಓಂ ಸಾಯಿ ಫ್ರೆಂಡ್ಸ್ ತಂಡವು ಕೊಟ್ಟಿಯೂರು ದೇವಸ್ಥಾನದ ಹಿನ್ನಲೆಯ ಕುರಿತಾದ ಸ್ಥಬ್ದಚಿತ್ರ, ಪದುವಾ ಫ್ರೆಂಡ್ಸ್ ತಂಡವು ಪುರಿ ಜಗನಾಥ ದೇವಸ್ಥಾನದ ಪ್ರತಿಕೃತಿಯ ಸ್ಥಬ್ದಚಿತ್ರ ಮೊದಲ ಬಾರಿಗೆ ಮಂಗಳೂರಿನಲ್ಲಿ ಕಂಗೊಳಿಸಿತು.. ಬಿರುವೆರ್ ಕುಡ್ಲ ತಂಡದ ಆಪರೇಷನ್ ಸಿಂಧೂರ ಕುರಿತ ಸ್ಪೆಷಲ್ ಟಾಬ್ಲೋ, ಹುಲಿ ವೇಷ ಸೇರಿಂದಂತೆ ೬ ಟಾಬ್ಲೋಗಳಿದ್ದವು. ಕುಡ್ಲ ಬ್ರದರ್ಸ್ ತಂಡದ ’ಛಾವಾ’ ಸಿನಿಮಾದ ದೃಶ್ಯರೂಪಕ ಜನರ ಮನಸೂರೆಗೊಳಿತು. ಬಲಿಪೆ ಫ್ರೆಂಡ್ಸ್, ತುಳುನಾಡ ಬಿರುವೆರ್ ತಂಡದಿಂದ ಹುಲಿ, ಜವನೆರ್ ಕುಡ್ಲ ತಂಡದಿಂದ ಹುಲಿ ಹಾಗೂ ದೇವಿಯ ಅಷ್ಟಭುಜದ ವೇಷದೊಂದಿಗೆ ಕುಣಿತ ಭಜನೆ ಟಾಬ್ಲೋಗಳಿದ್ದವು. ಕುಡ್ಲ ಫ್ರೆಂಡ್ಸ್ ಹುಲಿ ಹಾಗೂ ಮಕ್ಕಳ ವಿಶೇಷ ಟಾಬ್ಲೋ ಆಕರ್ಷಣೆ ಪಡೆಯಿತು. ರೈಸಿಂಗ್ ಫ್ರೆಂಡ್ಸ್ ತಂಡದ ಹುಲಿ, ಟೀಮ್ ಅವತಾರ್ ತಂಡದ ರಾಮಾಯಣ ಕುರಿತ ವಿಶೇಷ ಟಾಬ್ಲೋ, ಕಾಲ ಭೈರವ ಫ್ರೆಂಡ್ಸ್ ತಂಡದಿಂದ ಬೇಲಾಡಿ ಬಾವ’ಅಪ್ಪು-ತೋನ್ಸೇ’ ಕಂಬಳಕೋಣಗಳ ಸ್ಮರಣಾರ್ಥ ಬೃಹತ್ ಹುಲಿಯ ಟಾಬ್ಲೋವು ವಿಶೇಷ ಡೆಕೋರೇಷನ್ ನೊಂದಿಗೆ ಕಂಗೊಳಿಸಿತು. ತುಳುನಾಡ ಪ್ರತಿಷ್ಠಾ ತಂಡವು ಬಸ್ರೂರು ತುಳುವೇಶ್ವರ ದೇವಸ್ಥಾನದ ಹಿನ್ನಲೆಯ ಸ್ತಬ್ದಚಿತ್ರ, ಟೀಮ್ ತಾಂಡವದಿಂದ ವಿನೂತನ ಟಾಬ್ಲೋಗಳು ಮಂಗಳೂರು ದಸರಾದಲ್ಲಿ ಕಣ್ಮನ ಸೆಳೆಯಿತು.

ದಸರಾ ಮೆರವಣಿಗೆ ಸಾಗಿ ಬಂದ ರಸ್ತೆಯ ಇಕ್ಕೆಲಗಳಲ್ಲಿಯೂ ಜನ ಜಾತ್ರೆಯೇ ನೆರೆದಿತ್ತು. ಮೆರವಣಿಗೆ ದಾರಿಯಲ್ಲಿ ಸಂಗೀತ ರಸಮಂಜರಿ ಹಾಗೂ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ಸಾರ್ವಜನಿಕರ ಗಮನ ಸೆಳೆಯಿತು. ಹುಲಿವೇಷ ಮಂಗಳೂರು ದಸರಾದ ವಿಶೇಷ ಆಕರ್ಷಣೆಯಾಗಿದ್ದು, ತಾಸೆಯ ಪಟ್ಟಿನ ಲಯಕ್ಕೆ ಪ್ರೇಕ್ಷಕರೂ ಹೆಜ್ಜೆ ಹಾಕಿದರು. ಶೋಭಾಯಾತ್ರೆ ಸಾಗುವ ರಸ್ತೆಯ ಇಕ್ಕೆಲ್ಲಗಳಲ್ಲಿ ನಾನಾ ರೀತಿಯ ಅಂಗಡಿಗಳು, ಐಸ್‌ಕ್ರೀಮ್‌, ಚರುಂಬುರಿ, ಪೊಟ್ಯಾಟೋ ಟ್ವಿಸ್ಟರ್, ಗೋಳಿಸೋಡಾ ಅಂಗಡಿಗಳು ಸೇರಿದಂತೆ ನಾನಾ ರೀತಿಯ ವ್ಯಾಪಾರ ಮಳಿಗೆಗಳಲ್ಲಿ ವ್ಯಾಪಾರ ಚುರುಕಾಗಿ ನಡೆಯಿತು. ಶ್ರೀ ಶಾರದಾ ಮಾತೆಯ ಶೋಭಾಯಾತ್ರೆಯು ಶ್ರೀ ಕ್ಷೇತ್ರದಿಂದ ಹೊರಟು ಕಂಬ್ಳ ರಸ್ತೆ, ಮಣ್ಣಗುಡ್ಡ ಮಾರ್ಗವಾಗಿ ಬ್ರಹ್ಮಶ್ರೀ ನಾರಾಯಣಗುರು ವೃತ್ತ, ಲೇಡೀಹಿಲ್, ಲಾಲ್‌ಬಾಗ್, ಬಲ್ಲಾಳ್ ಬಾಗ್, ಪಿವಿಎಸ್ ಸರ್ಕಲ್, ನವಭಾರತ್ ಸರ್ಕಲ್, ಕೆ.ಎಸ್‌. ರಾವ್ ರಸ್ತೆ, ಹಂಪನಕಟ್ಟೆ, ವಿವಿ ಕಾಲೇಜು ವೃತ್ತದಿಂದ ಬಲಕ್ಕೆ ತಿರುಗಿ ಗಣಪತಿ ಹೈಸ್ಕೂಲ್ ಮಾರ್ಗವಾಗಿ ಶ್ರೀ ವೆಂಕಟರಮಣ ದೇವಸ್ಥಾನದ ಮುಂಭಾಗದಿಂದ ಕಾರ್ ಸ್ಟ್ರೀಟ್, ಅಳಕೆಯಾಗಿ ಶ್ರೀ ಕ್ಷೇತ್ರಕ್ಕೆ ಮರಳಿತು.

About The Author

Leave a Reply