

ಬಂಟ್ವಾಳ: ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೇ 27ರಂದು ನಡೆದ ಅಬ್ದುಲ್ ರೆಹಮಾನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಇದುವರೆಗೆ ಬಂಧಿತರಾಗಿರುವ 13 ಆರೋಪಿಗಳು ಸೇರಿದಂತೆ ಒಟ್ಟು 14 ಮಂದಿ ಮೇಲೆ ಪೊಲೀಸರು ಕರ್ನಾಟಕ ಸಂಘಟಿತ ಅಪರಾಧ ತಡೆ ಕಾಯ್ದೆ-2000 (KCOCA Act – ಕೋಕಾ) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.
ಆರೋಪಿಗಳ ಕಾನೂನುಬಾಹಿರ ಚಟುವಟಿಕೆಗಳು ಸಮಾಜದಲ್ಲಿ ಅಶಾಂತಿ ಮತ್ತು ಕೋಮು ಸಂಘರ್ಷಕ್ಕೆ ಕಾರಣವಾಗಿದ್ದರಿಂದ, ಈ ಮಹತ್ವದ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಪ್ರಕರಣದ ಹಿನ್ನೆಲೆ:
ದಿನಾಂಕ 27-05-2025 ರಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನಲ್ಲಿ ಅಬ್ದುಲ್ ರೆಹಮಾನ್ ಅವರ ಕೊಲೆ ನಡೆದಿತ್ತು.
ತನಿಖೆ ವೇಳೆ ಈ ಪ್ರಕರಣದಲ್ಲಿ ಭಾಗಿಯಾಗಿದ್ದ 13 ಆರೋಪಿಗಳನ್ನು ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.
ಪ್ರಮುಖ ಆರೋಪಿ ನಾಪತ್ತೆ:
ಈ ಪ್ರಕರಣದ ಮತ್ತೊಬ್ಬ ಪ್ರಮುಖ ಆರೋಪಿ, ಭರತ್ ರಾಜ್ ಯಾನೆ ಭರತ್ ಕುಮ್ಡೇಲು ಮರೆಸಿಕೊಂಡಿರುವುದಾಗಿ ತಿಳಿದುಬಂದಿದೆ. ಆತನಿಗಾಗಿ ಪೊಲೀಸರು ಶೋಧ ಕಾರ್ಯವನ್ನು ತೀವ್ರಗೊಳಿಸಿದ್ದಾರೆ.
‘ಕೋಕಾ’ ಕಾಯ್ದೆ ಅನ್ವಯ:
ಸದ್ರಿ ಕೊಲೆ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳು ಕೇವಲ ಈ ಘಟನೆಗಷ್ಟೇ ಸೀಮಿತರಾಗಿಲ್ಲ. ಅವರು ಹಲವು ವರ್ಷಗಳಿಂದ ಕೊಲೆ, ಕೊಲೆ ಯತ್ನ, ಪ್ರಚೋದನಕಾರಿ ಭಾಷಣಗಳು ಸೇರಿದಂತೆ ಸಮಾಜದ ಶಾಂತಿ ಕದಡುವ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ಪಾಲ್ಗೊಂಡಿರುವುದು ತನಿಖೆಯಲ್ಲಿ ದೃಢಪಟ್ಟಿದೆ.
ಸಮಾಜದಲ್ಲಿ ಉದ್ದೇಶಪೂರ್ವಕವಾಗಿ ಕೋಮು ಸಂಘರ್ಷ ಮತ್ತು ಅಶಾಂತಿಯನ್ನು ಸೃಷ್ಟಿಸುತ್ತಿದ್ದ ಈ ಸಂಘಟಿತ ಅಪರಾಧಿಗಳ ವಿರುದ್ಧ ಈಗ ಕರ್ನಾಟಕ ಸಂಘಟಿತ ಅಪರಾಧ ತಡೆ ಕಾಯ್ದೆ-2000 (KCOCA Act) ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಕಾಯ್ದೆಯು ಸಂಘಟಿತ ಅಪರಾಧಗಳ ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ಒಳಗೊಂಡಿದೆ. ಪ್ರಕರಣದ ಮುಂದಿನ ತನಿಖೆಯನ್ನು ಕೋಕಾ ಕಾಯ್ದೆಯ ಅಡಿಯಲ್ಲಿ ನಡೆಸಲಾಗುವುದು ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.